ಬೆಳಗಾವಿ :ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಆದ್ರೆ ನೆಕ್ಸ್ಟ್ ನಾನೇ ಇದೀನಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಮತ್ತೊಂದು ಬಾರಿ ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆ ಖಾಲಿ ಆದ್ರೆ ನೆಕ್ಸ್ಟ್ ನಾನೇ ಇದೀನಿ. ಸಿಎಂ ಸ್ಥಾನ ಬದಲಾವಣೆಯಾದ್ರೆ ನಂದೇ ನಂಬರ್ ಇದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಸಿಎಂ ಇದ್ದಾರೆ. ಇದೇ ಒಳ್ಳೆಯ ಸರ್ಕಾರ ನಡೀತಿದೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು. ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿವೆ ಎಂದರು.