ಬೆಳಗಾವಿ: ಉತ್ತರ ಕರ್ನಾಟಕದ ಗಟ್ಟಿಧ್ವನಿ, ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದಾಗ ಏರುಧ್ವನಿಯಲ್ಲೇ ಮಾತನಾಡಿ ಸ್ವಪಕ್ಷದವರಿಗೆ ಸವಾಲ್ ಹಾಕುತ್ತಿದ್ದ ಧೀಮಂತ ನಾಯಕ ದಿ.ಮಾಜಿ ಸಚಿವ ಉಮೇಶ ಕತ್ತಿ ಇನ್ನು ನೆನಪು ಮಾತ್ರ. ಉಮೇಶ ಕತ್ತಿಯನ್ನು ಕಳೆದುಕೊಂಡ ಕುಟುಂಬದಲ್ಲಿ ನೀರವಮೌನ ಆವರಿಸಿದೆ.
ಜಿಲ್ಲೆಯ ಹುಕ್ಕೇರಿಯ ದೊಡ್ಡಸಾಹುಕಾರ, ನೇರನುಡಿ, ನಿಷ್ಠುರವಾದಿ ಹೀಗೆ ಹಲವು ಹೆಸರಿನಿಂದಲೇ ಪ್ರಖ್ಯಾತಿ ಹೊಂದಿದ್ದ ದಿ.ಉಮೇಶ್ ಕತ್ತಿ ಅವರ ನಿಧನದಿಂದ ಉತ್ತರ ಕರ್ನಾಟಕ ಜನತೆಗೆ ತೀವ್ರ ಆಘಾತ ಉಂಟಾಗಿದೆ. ಜೊತೆಗೆ ಕತ್ತಿ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಅಪಾರ ನೋವುಂಟಾಗಿದೆ. ಕಳೆದ ಮಂಗಳವಾರ ರಾತ್ರಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹುಕ್ಕೇರಿ ಶ್ರೀಗಳ ನೇತೃತ್ವದಲ್ಲಿ ಉಮೇಶ್ ಕತ್ತಿ ಅವರ ಅಂತ್ಯಕ್ರಿಯ ನಡೆಸಲಾಯಿತು. ಕತ್ತಿ ಅವರ ಅಕಾಲಿಕ ನಿಧನದಿಂದ ಸ್ವಯಂಪ್ರೇರಿತವಾಗಿ ಕಳೆದ ಎರಡು ದಿನಗಳಿಂದ ಹುಕ್ಕೇರಿ ಪಟ್ಟಣ ಸ್ತಬ್ಧವಾಗಿದೆ.
ಕತ್ತಿ ಕುಟುಂಬದಲ್ಲಿ ನೀರವಮೌನ..ರಾಜಕೀಯ ನಾಯಕರಿಂದ ಸಾಂತ್ವನ ಕುಟುಂಬ ಸದಸ್ಯರಿಂದ ಸಮಾಧಿಗೆ ಪೂಜೆ: ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಸಮಾಧಿಗೆ ಕುಟುಂಬಸ್ಥರು ಪೂಜಾಕಾರ್ಯಗಳನ್ನು ನೆರವೇರಿಸಿದರು. ಈ ವೇಳೆ ಸಮಾಧಿ ಪೂಜೆ ಮಾಡಿ ಸಮಾಧಿಯ ಮೇಲೆ ಅವರಿಷ್ಟದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಮಾಡಲಾಯಿತು. ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಸಮಾಧಿಗೆ ಪೂಜೆ ಮಾಡಿದರು.
ಕತ್ತಿ ಕುಟುಂಬಸ್ಥರಿಗೆ ಗಣ್ಯರಿಂದ ಸಾಂತ್ವನ : ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ, ಬೈರತಿ ಬಸವರಾಜ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಹಲವು ರಾಜಕೀಯ ನಾಯಕರು ಉಮೇಶ ಕತ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರ ಜೊತೆ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಸಿಂಗ್, ಉಮೇಶ್ ಕತ್ತಿ ಹಾಗೂ ನಾನು ಸ್ನೇಹಿತರು. ನೇರವಾಗಿ ಹೇಳುವ ಎದೆಗಾರಿಕೆ ಉಮೇಶ್ ಅವರಿಗಿತ್ತು. ರಾಜ್ಯ ಹಾಗೂ ಗ್ರಾಮಗಳ ಅಭಿವೃದ್ಧಿ ಕುರಿತು ಹಲವಾರು ಬಾರಿ ನಾವು ಚರ್ಚೆ ನಡೆಸಿದ್ದೇವೆ. ಅವರ ಅಕಾಲಿಕ ಮರಣ ಬಿಜೆಪಿ ಪಕ್ಷಕ್ಕೆ ರಾಜ್ಯಕ್ಕೆ ಹಾಗೂ ದೇಶಕ್ಕೆ ವೈಯಕ್ತಿಕವಾಗಿ ನನಗೆ ತುಂಬಲಾಗದ ನಷ್ಟ ಎಂದು ಅರುಣ್ ಸಿಂಗ್ ಕಂಬನಿ ಮಿಡಿದರು ಉತ್ತರ ಕರ್ನಾಟಕ ತನ್ನ ಹಿರಿಯ ಮಗನನ್ನು ಕಳೆದುಕೊಂಡಿರುವ ವಾತಾವರಣ ನಿರ್ಮಾಣವಾಗಿದ್ದು,ಬೆಳಗಾವಿ ಜಿಲ್ಲೆ ಸೇರಿದಂತೆ ಹುಕ್ಕೇರಿ ಮತಕ್ಷೇತ್ರ ಮಮ್ಮಲ ಮರುಗುತ್ತಿದೆ.
ಉಮೇಶ ಕತ್ತಿ ಇದ್ದಲ್ಲಿ ನಗುವಿಗೆ ಬರ ಇರಲಿಲ್ಲ: ಉಮೇಶ ಕತ್ತಿ ಕುಟುಂಬಕ್ಕೆ ಸಾಂತ್ವನದ ಹೇಳಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಡಾ. ಕೆ ಸುಧಾಕರ್, ಉಮೇಶ ಕತ್ತಿ ಮತ್ತು ನಾನು ಸಚಿವ ಸಂಪುಟದ ಸಹೋದ್ಯೋಗಿಗಳು. ಹಿರಿಯ ನಾಯಕ ಉಮೇಶ ಕತ್ತಿಯವರ ಅಕಾಲಿಕ ನಿಧನ ನಮಗೆಲ್ಲರಿಗೂ ನೋವನ್ನುಂಟು ಮಾಡಿದೆ. ಅವರದು ನಂದು ಬಹಳ ದೀರ್ಘ ಕಾಲದ ಸ್ನೇಹ ಸಂಬಂಧ. ಉಮೇಶ ಕತ್ತಿ ಇದ್ದಲ್ಲಿ ನಗುವಿಗೆ ಬರ ಇರಲಿಲ್ಲ. ನಗುವಿನ ಲೋಕವನ್ನು ಅವರು ಆಯ್ಕೆ ಮಾಡಿಕೊಂಡು ಹೋಗಿದ್ದಾರೆ. ಅವರ ಇಲ್ಲದ ನಷ್ಟವನ್ನು ಎದುರಿವಂತಹ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹೇಳಿದರು.
ಇದನ್ನೂ ಓದಿ :ತಂದೆ ತಾಯಿ ಪಕ್ಕದಲ್ಲೇ ಮಣ್ಣಾದ ಉಮೇಶ ಕತ್ತಿ..