ಚಿಕ್ಕೋಡಿ:ಮಾಜಿ ಸಿಎಂ ಸಿದ್ದರಾಮಯ್ಯಗೆ ಹಿಂದುಳಿದ ಜಾತಿಗಳ ಬಗ್ಗೆ ಗೌರವ ಇದೆ ಎಂದು ಭಾವಿಸಿದ್ದೆವು. ಆದರೆ, ಹಿಂದುಳಿದ ಜಾತಿಗಳಿಂದ ಮತ ಪಡೆದು ಮೀಸಲಾತಿ ನೀಡದೇ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. ದಾರಿ ತಪ್ಪಿದ ಪಕ್ಷಕ್ಕೆ ದಾರಿ ತಪ್ಪಿದ ಮಗ ಸಿದ್ದರಾಮಯ್ಯ ನಾಯಕರಾಗಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳವನ್ನು ಯಾವ ಸರ್ಕಾರಗಳು ಮಾಡಲಿಲ್ಲ. 60 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೂ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ಕಾಂಗ್ರೆಸ್ ಒಂದು ದಾರಿ ತಪ್ಪಿದ ಪಕ್ಷ. ಗೊತ್ತು ಗುರಿ ಇಲ್ಲದ ಪಕ್ಷ. ದಾರಿ ತಪ್ಪಿದ ಪಕ್ಷಕ್ಕೆ ದಾರಿ ತಪ್ಪಿದ ಮಗ ಸಿದ್ದರಾಮಯ್ಯ ನಾಯಕರಾಗಿದ್ದಾರೆ. ಹಿಂದುಳಿದ ಜಾತಿ ಬಗ್ಗೆ ಸಿದ್ದರಾಮಯ್ಯಗೆ ಕಳಕಳಿ ಇದ್ದಿದ್ದರೆ ಹಿಂದೆಯೇ ನಮಗೆ ಮೀಸಲಾತಿ ಸಿಗುತ್ತಿತ್ತು ಎಂದರು.
ಇದನ್ನೂ ಓದಿ:ಬೊಮ್ಮಾಯಿ ಸರ್ಕಾರ ಕೊಹ್ಲಿಯಂತೆ ಉತ್ತಮ ಬ್ಯಾಟಿಂಗ್ ಮಾಡುತ್ತಿದೆ: ಶಾಸಕ ರಾಜುಗೌಡ
ಕಾಂಗ್ರೆಸ್ನದ್ದು ಯಾವಾಗಲೂ 50 - 50 ಫಾರ್ಮುಲಾ ಅನುಸರಿಸುತ್ತೆ. ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಯಾರನ್ನು ಜೋಡಿಸುತ್ತಿದ್ದಾರೆ. ದೇಶವನ್ನು ಜೋಡಿಸುವುದು ಬೇಕಾಗಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಜೋಡಿಸಲಿ. ಅವರಿಬ್ಬರೂ 50-50 ಫಾರ್ಮುಲಾ ಮಾಡುತ್ತಾ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ: ವಲಸಿಗ ಶಾಸಕರಿಗೆ ಕಾಂಗ್ರೆಸ್ ಸೇರಲು ಮುಕ್ತ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಕಡೆ ಇವರಿಗೆ (ಕಾಂಗ್ರೆಸ್) ಎಲೆಕ್ಷನ್ನಲ್ಲಿ ನಿಲ್ಲಲು ಅಭ್ಯರ್ಥಿಗಳು ಯಾರೂ ಸಿಗುತ್ತಿಲ್ಲ. ವಲಸಿಗರು ಮರಳಿ ಬಂದ್ರೆ ಟಿಕೆಟ್ ಕೊಡಲ್ಲ ಈ ಹಿಂದೆ ಹೇಳಿದ್ದರು. ಶಾಸಕರ ಬಗ್ಗೆ ಯಾವ್ಯಾವ ಶಬ್ದ ಬಳಕೆ ಮಾಡಿದ್ದರು. ಈಗ ಕಾಂಗ್ರೆಸ್ ನವರು ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವ ಪರಿಸ್ಥಿತಿ ಇದೆ ಎಂದು ರಾಮುಲು ಗೇಲಿ ಮಾಡಿದರು.