ರೈತರ ಕುರಿತಾದ ಸಚಿವ ಶಿವಾನಂದ ಪಾಟೀಲ್ ಭಾಷಣ ಚಿಕ್ಕೋಡಿ(ಬೆಳಗಾವಿ):ಬರಗಾಲದ ಸಮಯದಲ್ಲಿ ರೈತರು ಸಹಜವಾಗಿಯೇ ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ. ಭಾನುವಾರ ರಾತ್ರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ವಿವಿಧೋದ್ದೇಶ ಸಹಕಾರಿ ಸಂಘದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘‘ಬರಗಾಲದ ಸಮಯದಲ್ಲಿ ರೈತರು ಸಹಜವಾಗಿಯೇ ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ, ಹಿಂದಿನ ಸರ್ಕಾರಗಳು ಸಾಲ ಮನ್ನಾ ಕೂಡಾ ಮಾಡಿವೆ. ಆದರೆ, ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು' ಎಂದು ಸಚಿವ ಶಿವಾನಂದ ಪಾಟೀಲ್ ಸಲಹೆ ನೀಡಿದರು.
ಕಾರ್ಯಕ್ರಮದ ಬಳಿಕ ಹಿಜಾಬ್ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆಯಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಹಿಜಾಬ್ ಬಗ್ಗೆ ಚರ್ಚೆ ಇಲ್ಲ ಎಂದು ಹೇಳಿದರು. ಜಾತಿ ಜನಗಣತಿ ಕಾಂತರಾಜು ಆಯೋಗ ನಡೆಸಿದ ವರದಿಯನ್ನು ತಿರಸ್ಕರಿಸಿ ಮತ್ತೊಮ್ಮೆ ಜಾತಿ ಜನಗಣತಿ ಮಾಡುವಂತೆ ವೀರಶೈವ ಮಹಾಸಭಾದ ಒತ್ತಾಯ ಇದೆ ಎಂದು ಪ್ರತಿಕ್ರಿಯಿಸಿ ಮುನ್ನಡೆದರು.
ಸಕ್ಕರೆ ಕಾರ್ಖಾನೆ ಮೋಸ ಮಾಡಿದರೆ ಲೈಸನ್ಸ್ ರದ್ಧತಿ-ಸಚಿವ ಪಾಟೀಲ್: ಇದಕ್ಕೂ ಮುನ್ನ, ಸಕ್ಕರೆ ಕಾರ್ಖಾನೆ ಕುರಿತು ಮಾತನಾಡಿದ ಸಚಿವರು, ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಮುಂದಿನ ಕಬ್ಬು ಕಟಾವು ಹಂಗಾಮಿಗೆ ಸರ್ಕಾರದ ವತಿಯಿಂದ ತೂಕದ ಮಷಿನ್ ಅಳವಡಿಕೆ ಮಾಡಲಾಗುವುದು. ನಿನ್ನೆ ಸರ್ಕಾರದಿಂದ ಒಂದು ಆದೇಶ ಮಾಡಲಾಗಿದೆ. ತಾಲೂಕಿನ ಎಪಿಎಂಸಿ ತೂಕದ ಮಷಿನ್ ಮುಖಾಂತರ ತೂಕವನ್ನು ಮಾಡಿಕೊಂಡು ಕಾರ್ಖಾನೆಗಳಿಗೆ ರೈತರು ಕಬ್ಬು ಸರಬರಾಜು ಮಾಡಬೇಕು. ಏನಾದರೂ ಸಕ್ಕರೆ ಕಾರ್ಖಾನೆ ಮೋಸ ಮಾಡಿದರೆ ಅವರ ಲೈಸೆನ್ಸ್ ರದ್ಧತಿ ಮಾಡಲಾಗುವುದು. ಮುಂದಿನ ವರ್ಷ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಮಷಿನ್ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.
ಮುಂದುವರೆದು, ಕಳೆದ ಬಾರಿ ಸಕ್ಕರೆ ಕಾರ್ಖಾನೆಗಳು 19 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಉಳಿಸಿಕೊಂಡಿದ್ದರು. ನಾನು ಸಚಿವನಾದ ಬಳಿಕ 20 ಸಾವಿರ ಕೋಟಿ ರೂಪಾಯಿ ಕೊಡಿಸಲಾಗಿದೆ. ಹೆಚ್ಚು ಲಾಭದಲ್ಲಿರುವ ಕಂಪನಿಗಳಿಂದ 50 ರಿಂದ 100 ರೂ ವರೆಗೆ ಹೆಚ್ಚುವರಿ ಹಣವನ್ನು ಕೊಡಿಸಲಾಗಿದೆ ಎಂದು ಸಕ್ಕರೆ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:'ಸಚಿವ ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ': ಬಿವೈ ವಿಜಯೇಂದ್ರ