ಬೆಳಗಾವಿ:ರಾಜ್ಯ ಕಾರ್ಮಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಶೀಘ್ರವೇ 155 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
ಇಎಸ್ಐ ಆಸ್ಪತ್ರೆಗಳಿಗೆ ಶೀಘ್ರವೇ 155 ವೈದ್ಯರ ನೇಮಕ: ಸಚಿವ ಶಿವರಾಮ ಹೆಬ್ಬಾರ್ - Shivaram hebbar latest news
ರಾಜ್ಯ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಬೆಳಗಾವಿಯ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ರಾಜ್ಯ ಕಾರ್ಮಿಕ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಲಾಗುವುದೆಂದು ತಿಳಿಸಿದರು.
ಇಲ್ಲಿನ ಅಶೋಕ ನಗರದ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕಾರ್ಮಿಕ ಆಸ್ಪತ್ರೆಯಲ್ಲಿ ಒಟ್ಟು 590 ವೈದ್ಯರ ಹುದ್ದೆಗಳಲ್ಲಿ 313 ಜನ ಕೆಲಸ ನಿರ್ವಹಿಸುತ್ತಿದ್ದು, 277 ಡಾಕ್ಟರ್ ಕೊರತೆಯಿದೆ. ಕೆಪಿಎಸ್ ಸಿ ಮೂಲಕ 155 ಜನ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಪತ್ರ, ಸಿಂಧುತ್ವ ಹಾಗೂ ದಾಖಲಾತಿಗಳ ಪರಿಶೀಲನೆ ಹಂತದಲ್ಲಿ ಇದೆ. ಇನ್ನೂ ಹತ್ತರಿಂದ ಹದಿನೈದು ದಿನಗಳಲ್ಲಿ ಅವರಿಗೆ ನೇಮಕಾತಿ ಆದೇಶ ನೀಡಿ, ವೈದ್ಯರ ಕೊತರೆ ಇರುವ ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದರು.
ಕೋವಿಡ್-19 ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಹಾಗೂ ರೋಗಿಗಳ ಆರೈಕೆ ಮತ್ತು ಸುರಕ್ಷತೆಗೆ ಅನುವು ಮಾಡಿಕೊಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಕೊರತೆ ಇಲ್ಲ. ರಾಜ್ಯದಲ್ಲಿ ಈಗಾಗಲೇ ಒಂದು ವರ್ಷಕ್ಕೆ 600 ಕೋಟಿ ರೂ.ಗಳ ಔಷಧಿಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.