ಬೆಳಗಾವಿ: "1ರಿಂದ 10 ಹೆಚ್ಪಿ ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಚಾಲಿತ ಮಗ್ಗ ಘಟಕಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಿ ಶೂನ್ಯ ಬಿಲ್ ನೀಡಲಾಗುವುದು. ಈ ಕುರಿತು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ" ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, "10ಕ್ಕಿಂತ ಹೆಚ್ಚು ಹಾಗೂ 20 ಹೆಚ್ಪಿವರೆಗಿನ ವಿದ್ಯುತ್ ಮಗ್ಗಗಳ 500 ಯುನಿಟ್‌ವರೆಗಿನ ವಿದ್ಯುತ್ ಬಳಕೆಗೆ ಪ್ರತಿ ಯುನಿಟ್‌ಗೆ 1.25 ರೂ. ರಿಯಾಯಿತಿ ನೀಡಲಾಗುವುದು" ಎಂದರು.
"ಜವಳಿ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಘಟಕ ಯೋಜನಾ ವೆಚ್ಚದ ಮೇಲೆ ಶೇ.75 ರಷ್ಟು ಅಥವಾ ಗರಿಷ್ಠ ಬಂಡವಾಳ ಸಹಾಯಧನ ರೂ.2 ಕೋಟಿವರೆಗೆ ನೀಡಲಾಗುತ್ತಿದೆ. ನೂತನ ಜವಳಿ ನೀತಿ ಅನ್ವಯ ಗರಿಷ್ಠ ರೂ.75 ಲಕ್ಷಗಳ ಅವಧಿ ಸಾಲದ ಮೇಲೆ ಮೊದಲ 5 ವರ್ಷಗಳ ಅವಧಿಗೆ ಬಡ್ಡಿ ಸಹಾಯಧನ ಒದಗಿಸಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ರೂ.1 ಕೋಟಿ ಸಹಾಯಧನ ಹಾಗೂ ಅತಿ ಸಣ್ಣ ಜವಳಿ ಘಟಕಗಳಿಗೆ ಶೇ.50 ರಷ್ಟು ಅಥವಾ ಗರಿಷ್ಠ ರೂ.50 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದು. ಪರಿಷ್ಕೃತ ಜವಳಿ ನೀತಿಯ ಅನುಸಾರ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, 10,000 ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡಿ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ" ಎಂದು ಹೇಳಿದರು.