ಚಿಕ್ಕೋಡಿ:ಮರಾಠ ಸಮಾಜ ಕೂಡ ನಮ್ಮ ರಾಜ್ಯದಲ್ಲಿ ಬಹಳ ದೊಡ್ಡದಾಗಿದೆ. ಮರಾಠಿ ಭಾಷಿಕರು ಎಂದು ತಿಳಿದುಕೊಳ್ಳವ ಬದಲು ಮರಾಠ ಸಮಾಜ ಅಂತ ಪರಿಗಣನೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಯಕ್ಸಂಬಾ ಗ್ರಾಮದ ಜೊಲ್ಲೆ ಕ್ಯಾಂಪಸ್‌ನಲ್ಲಿ ಕರ್ನಾಟಕ ಸರ್ಕಾರ, ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉಚಿತವಾಗಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಮರಾಠ ಸಮಾಜದಲ್ಲಿರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ವ್ಯವಸ್ಥೆ ಆಗಬೇಕು. ಆರ್ಥಿಕ-ಸಾಮಾಜಿಕ ಪರಿಸ್ಥಿತಿ ಒಳ್ಳೆಯದಾಗಿ, ಅವರು ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿದ್ದಾರೆ ಎಂದು ಹೇಳಿದರು. ಅದರಂತೆ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಮುಖಂಡರ ಬೇಡಿಕೆ ಇತ್ತು. ಲಿಂಗಾಯತ ಸಮಾಜ ಇನ್ನೂ ಹಿಂದುಳಿದ ಸಮಾಜವಾಗಿದೆ.
ಶೈಕ್ಷಣಿಕ ಕ್ರಾಂತಿ ಸೇರಿದಂತೆ ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕಾಗಿದೆ ಎಂದು ಬೇಡಿಕೆ ಇತ್ತು. ಸಿಎಂ ಯಡಿಯೂರಪ್ಪನ್ನವರು ಅದಕ್ಕೆ ಸ್ಪಂದಿಸಿ ಅದನ್ನು ಈಡೇರಿಸಿದ್ದಾರೆ. ಈ ಎರಡು ಕ್ರಮಗಳಿಗೆ ಸಿಎಂ ಯಡಿಯೂರಪ್ಪನವರನ್ನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನಮ್ಮ ಭಾರತ ದೇಶ ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ದೇಶ. ರಾಜ್ಯದಲ್ಲಿ ಕೂಡ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಮುಂದಕ್ಕೆ ಹೋಗುವ ಕೆಲಸ ಸಿಎಂ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂದು ಹೇಳಿದರು.