ಬೆಳಗಾವಿ: ಮುಂಗಾರು ಮಳೆ ತೀವ್ರ ಕೊರತೆಯಿಂದ ಬೆಳಗಾವಿ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಬಿತ್ತಿದ್ದ ಬೆಳೆಗಳು ಈಗ ಹಾನಿಗೆ ಒಳಗಾಗಿದ್ದು ರೈತರಲ್ಲಿ ಆತಂಕ ಶುರುವಾಗಿದೆ. ಈ ವೇಳೆ ರೈತರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧಾವಿಸಿದ್ದು, ತಮ್ಮದೇ ಒಡೆತನದ ಬೆಳಗಾಂ ಶುಗರ್ಸ್ದಿಂದ ಮೋಡ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ.
ಒಂದು ತಿಂಗಳು ವಿಳಂಬವಾಗಿ ಆರಂಭವಾದ ಮುಂಗಾರು ಮಳೆ ಬಳಿಕ ಮತ್ತೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಬಿತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಆಗದೇ ರೈತರು ಕೈಕಟ್ಟಿ ಕುಳಿತಿದ್ದಾರೆ. ಜಿಲ್ಲೆಯ 15 ತಾಲೂಕುಗಳ ಪೈಕಿ 13 ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಇನ್ನು ಬೆಳಗಾವಿ ಹಾಗೂ ಖಾನಾಪುರ ತಾಲೂಕು ಬರಪೀಡಿತ ಘೋಷಣೆ ಮಾಡಲು ರೈತರ ಆಗ್ರಹಿಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಅವರ ಒಡೆತನದ ಬೆಳಗಾಂ ಶುಗರ್ಸ್ ಕಂಪನಿಯೂ ಮೋಡ ಬಿತ್ತನೆ ಜಿಲ್ಲೆಯಲ್ಲಿ ಟೆಂಡರ್ ಪಡೆದುಕೊಂಡಿದೆ.
ಬೆಳಗಾವಿ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಕೃತಕ ಮಳೆ ಸುರಿಯುವಂತೆ ಮಾಡಲು ಬೆಳಗಾಂ ಶುಗರ್ಸ್ ಹಾಗೂ ಕ್ಯಾತಿ ಕ್ಲೈಮೆಟ್ ಮೊಡಿಫಿಕೇಶನ್ ಕನ್ಸಲ್ಟನ್ಸಿ ಕಂಪನಿಯಿಂದ ಮೋಡ ಬಿತ್ತನೆ ನಡೆಯಲಿದ್ದು, ಈ ಎರಡೂ ಕಂಪನಿಗಳಿಗೆ ರಾಜ್ಯ ಸರ್ಕಾರದಿಂದ ಅನುಮತಿ ಕೂಡ ದೊರೆತಿದೆ. ಮೋಡ ಬಿತ್ತನೆಗೆ ಅಂತಿಮ ಹಂತದ ಸಿದ್ದತೆಯನ್ನು ನಡೆಸಲಾಗಿದೆ.
ಈ ಕುರಿತು ಇತ್ತೀಚಿಗೆ ಮಾತನಾಡಿದ್ದ ಸಚಿವ ಸತೀಶ ಜಾರಕಿಹೊಳಿ, ನಾವು ಖಾಸಗಿಯಾಗಿ ಕೃತಕ ಮಳೆ ಸುರಿಸಲು ಅನುಮತಿ ಪಡೆದಿದ್ದೇವೆ. ಮುಂದಿನ ಒಂದು ವಾರದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ದೆಹಲಿಯಿಂದ ಇನ್ನೊಂದು ಅನುಮತಿ ಪಡೆಯುವ ಬಾಕಿ ಇದೆ. ಮೋಡ ಇದ್ದ ಕಡೆಯಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ನಮ್ಮ ಕಂಪನಿಯಿಂದ ಖರ್ಚು ವೆಚ್ಚ ಭರಿಸಲಾಗುವುದು ಎಂದು ತಿಳಿಸಿದ್ದಾರೆ.