ಬೆಳಗಾವಿ:ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹುದಲಿಯ ಬೆಳಗಾವಿ ಶುಗರ್ಸ್ ಪ್ರೈ.ಲಿಮಿಟೆಡ್ ವತಿಯಿಂದ ಮೋಡ ಬಿತ್ತನೆಗೆ ಮುಂದಾಗಿದೆ. ಇಂದು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಮೋಡ ಬಿತ್ತನೆ ಕಾರ್ಯಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.
ಮೋಡ ಬಿತ್ತನೆ ಕಾರ್ಯಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರ(ಡಿಜಿಸಿಎ) ಕಚೇರಿಯು ಗ್ರೀನ್ ಸಿಗ್ನಲ್ ನೀಡಿದೆ. ಸೆ.29 ಹಾಗೂ 30 ರಂದು ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಕ್ಯಾಪ್ಟನ್ ವೀರೇಂದ್ರ ಸಿಂಗ್ ಹಾಗೂ ಕ್ಯಾಪ್ಟನ್ ಆದರ್ಶ ಪಾಂಡೆ ನೇತೃತ್ವದಲ್ಲಿ ವಿಟಿ - ಕೆಸಿಎಂ ವಿಮಾನವು ಮೋಡ ಬಿತ್ತನೆ ಮಾಡಲಿದೆ. ಕಡಿಮೆ ಎತ್ತರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಎಸಿಎಲ್-2 ಅಯೋಡೈಡ್ ಹಾಗೂ 20 ಸಾವಿರ ಅಡಿ ಮೇಲೆ ಎತ್ತದರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಲ್ವರ್ ಐಯೋಡೈಡ್ ರಾಸಾಯನಿಕ ಸಿಂಪಡಿಸಲಾಗುತ್ತದೆ.
ಇದನ್ನೂ ಓದಿ :ಕಾವೇರಿ ಜಲವಿವಾದ ಸಂಬಂಧ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿ: ಸಚಿವ ಸತೀಶ್ ಜಾರಕಿಹೊಳಿ
ಒಂದು ವೇಳೆ, ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಮೋಡಗಳು ಇದ್ದರೆ ರಾಸಾಯನಿಕ ಸಿಂಪಡಣೆ ಮಾಡಿದ ಐದು ನಿಮಿಷಗಳಲ್ಲಿ ಮಳೆ ಬರಬಹುದು.
ಮೋಡಗಳು ಇರದಿದ್ದಲ್ಲಿ ಹಾಗೇ ಹಿಂದಿರುಗಲಾಗುತ್ತದೆ. ಬೆಳಗಾವಿಯಲ್ಲಿ ಮೋಡಗಳು ಕಂಡು ಬಂದಿರುವುದರಿಂದ ಮೋಡ ಬಿತ್ತನೆಗೆ ಪೂರಕ ವಾತಾವರಣವಿದೆ. 5 ರಿಂದ 10 ಸಾವಿರ ಅಡಿಗಳ ಮೇಲೆ ಮೋಡಗಳನ್ನು ಆಕರ್ಷಿಸಲು ಸಿಲ್ವರ್ ಐಯೋಡೈಡ್ ರಾಸಾಯನಿಕವನ್ನು ಆಗಸದಲ್ಲಿ ಸಿಂಪಡಣೆ ಮಾಡಲಾಗುತ್ತದೆ ಎಂದು ಸಿಬ್ಬಂದಿ ವಿವರಿಸಿದರು. ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಂತ ಖರ್ಚಿನಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಮೋಡ ಬಿತ್ತನೆ : ಸೆ.4 ರಂದು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಹಾವೇರಿ ಜಿಲ್ಲೆಯಲ್ಲಿಯೂ ಮಳೆ ಮಾಯವಾಗಿರುವ ಹಿನ್ನೆಲೆ ಪ್ರಾಯೋಗಿಕ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದರು. ತಮ್ಮ ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಸಂಸ್ಥೆ ಮೂಲಕ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಕೈಗೊಂಡಿದ್ದರು.
ಶಾಸಕ ಹಾಗೂ ಉದ್ಯಮಿಯಾಗಿರುವ ಪ್ರಕಾಶ್ ಕೋಳಿವಾಡ ಅವರ ಬಳಿ ಮೋಡ ಬಿತ್ತನೆಗಾಗಿಯೇ ಸಿದ್ಧಪಡಿಸಿರೋ ವಿಶೇಷ ವಿಮಾನ ಇರುವುದರಿಂದ ಹಾವೇರಿ ಜಿಲ್ಲಾದ್ಯಂತ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡುತ್ತೇನೆ ಎಂದು ತಿಳಿಸಿದ್ದರು. ಸೆ.4 ಸೋಮವಾರ ದಂದು ಹುಬ್ಬಳ್ಳಿಯ ಏರ್ಪೋರ್ಟ್ನಿಂದ ಹೊರಟ ವಿಮಾನ ಮೋಡ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿತ್ತು. ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಕಳೆದ ವರ್ಷವೂ ಸಹ ಮೋಡ ಬಿತ್ತನೆ ಮಾಡಲಾಗಿತ್ತು.
ಇದನ್ನೂ ಓದಿ :ಎರಡ್ಮೂರು ದಿನಗಳಲ್ಲಿ ಮೋಡ ಬಿತ್ತನೆ ಬಗ್ಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್