ಬೆಳಗಾವಿ: ಮೂರು ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಸಚಿವ ಕೆ.ಎನ್.ರಾಜಣ್ಣ ತಮ್ಮ ವಯಕ್ತಿಕ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಪಕ್ಷ ಅಂತಿಮವಾಗಿ ನಿರ್ಧರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಕುಮಾರ ಗಂಧರ್ವ ರಂಗಮಂದಿರ ಆವರಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಂತೂ ಅದರ ಚರ್ಚೆಯ ಅವಶ್ಯಕತೆ ಇಲ್ಲ. ನಾನಂತೂ ಡಿಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ಸಚಿವ ಕೆ ಎನ್ ರಾಜಣ್ಣ ತಮ್ಮ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಇನ್ಮುಂದೆ ಪಕ್ಷದಲ್ಲಿ ಚರ್ಚೆ ಪ್ರಾರಂಭ ಆಗಬಹುದು. ಡಿಸಿಎಂ ಹುದ್ದೆ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ನಾನಂತೂ ಆಕಾಂಕ್ಷಿ ಅಲ್ಲ. ಪಕ್ಷ ಒಂದು ವೇಳೆ ನಿರ್ಧರಿಸಿದರೆ ಅವರ ಸಾಮರ್ಥ್ಯ ನೋಡಿ ಡಿಸಿಎಂ ಮಾಡುತ್ತದೆ ಎಂದರು.
ಸರ್ಕಾರದ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಪಾದಯಾತ್ರೆ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಪಾದಯಾತ್ರೆ ಮಾಡಲಿ, ಅದರಿಂದ ನಮಗೆ ದುಪ್ಪಟ್ಟು ಲಾಭವಾಗಲಿದೆ. ಹಿಂದೆ ಬಿಜೆಪಿ ಸರ್ಕಾರದ ಸಮಸ್ಯೆಗಳ ನಡುವೆ ಕಷ್ಟ ಕಾಲದಲ್ಲೂ ಸಹ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದು ನಮ್ಮ ಸರ್ಕಾರದ ಸಾಧನೆ ಎಂದು ಸಮರ್ಥಿಸಿಕೊಂಡರು. ಇನ್ನು 2008ರಲ್ಲಿ ಸಿದ್ದರಾಮಯ್ಯ, ಹೆಚ್ ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಬಿಜೆಪಿ ಸೇರಲು ರೆಡಿಯಾಗಿದ್ದರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಈ ಸಂಬಂಧ ಮಾತನಾಡಿದ್ದಾರೆ. ಎಲ್ಲರೂ ಹೇಳಿಕೆ ಕೊಡುವುದು ಸರಿಯಲ್ಲ. ರಾಜಕೀಯದಲ್ಲಿ ಎಲ್ಲಾ ರೀತಿಯ ಚರ್ಚೆಗಳು ಆಗುತ್ತವೆ. ನಾಲ್ಕು ಗೋಡೆಗಳ ಮಧ್ಯೆ ಬೇರೆ ಇರುತ್ತೆ, ಹೊರಗಡೆ ಬೇರೆ ರೀತಿಯಲ್ಲೇ ಚರ್ಚೆಯಾಗುತ್ತದೆ. ಚರ್ಚೆಗಳು ಆಗಿದ್ದನ್ನೆಲ್ಲಾ ನೀವು ಕ್ಯಾಚ್ ಮಾಡಿದ್ರೆ ಹೇಗೆ ಎಂದು ಸತೀಶ್ ಜಾರಕಿಹೊಳಿ ಮುಗುಳ್ನಕ್ಕರು.