ಬೆಳಗಾವಿ: ನನಗೆ ಆರೋಗ್ಯದ ವಿಚಾರವೇ ಮುಖ್ಯ, ಆ ನಂತರವೇ ಪಾಲಿಟಿಕ್ಸ್ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಇಂದಿನ ಬ್ರೇಕ್ ಫಾಸ್ಟ್ಗೆ ಗೈರಾಗಿರುವ ವಿಚಾರಕ್ಕೆ ಗೋಕಾಕ್ನ ತಮ್ಮ ಮನೆಯಲ್ಲಿ ಪ್ರತಿಕ್ರಿಯಿಸಿರುವ ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ನನಗೂ ಕೂಡ ಆಹ್ವಾನ ನೀಡಿದ್ದರು. ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಸರಿ ಇಲ್ಲದ ಕಾರಣ ಹೋಗಲು ಆಗಿಲ್ಲ ಎಂದರು.
ನಾಳೆ ಸಂಜೆ ಬೆಂಗಳೂರಿಗೆ ಹೋಗುತ್ತೇನೆ. ಅಲ್ಲಿ ಹೋದ ಬಳಿಕ ಅದೇನು ವಿಷಯ ಅನೋದು ಚರ್ಚೆ ಮಾಡುತ್ತೇವೆ. ಮೂರ್ನಾಲ್ಕು ದಿನಗಳಿಂದ ರೆಸ್ಟ್ನಲ್ಲಿ ಇದ್ದೇನೆ. ಆರೋಗ್ಯ ಸರಿ ಆದ ಬಳಿಕ ಹೋಗುತ್ತೇನೆ ಎಂದರು. ಗುರು - ಶಿಷ್ಯರಲ್ಲಿ ಹೊಂದಾಣಿಕೆ ಇಲ್ಲ, ಹಾಗಾಗಿ ಈ ಉಪಹಾರ ಕೂಟಕ್ಕೆ ಗೈರಾಗಿದ್ದೀರಾ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಕೆಶಿ ಸೇರಿ 16 ಸಚಿವರಿಗೆ ಆಹ್ವಾನ
ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಂಪುಟ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಶನಿವಾರ ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಡಿಸಿದ್ದರು. 16 ಮಂದಿ ಸಚಿವರು ಉಪಹಾರ ಕೂಟದಲ್ಲಿ ಇಂದು ಭಾಗಿಯಾಗಲಿದ್ದಾರೆ. ಉಳಿದ 16 ಮಂದಿ ಸಚಿವರಿಗೆ ಮುಂದಿನ ಶನಿವಾರ ಉಪಹಾರ ಮೀಟಿಂಗ್ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಆದರೆ, ಇಂದಿನ ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅನಾರೋಗ್ಯದ ಕಾರಣ ಗೈರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೇ ಇರುವ ಸಚಿವರು, ಸಭೆಗೆ ಬರಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೂ ನೀಡಿದ್ದಾರೆ. ಉಳಿದಂತೆ ಡಿಸಿಎಂ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಚಿವರಾದ ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ಎಂ ಬಿ ಪಾಟೀಲ್, ಹೆಚ್ ಸಿ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಕೆ ಎನ್ ರಾಜಣ್ಣ, ದಿನೇಶ್ ಗುಂಡೂರಾವ್ ಮತ್ತು ಕೆ ಜೆ ಜಾರ್ಜ್ ಸೇರಿ 15 ಜನ ಸಚಿವರು ಪಾಲ್ಗೊಂಡಿದ್ದರು.
ಇನ್ನು ಸಚಿವರಿಗೆ ನೀಡಿದ ಟಾಸ್ಕ್ ಬಗ್ಗೆ ಉಪಹಾರ ಕೂಟದ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆ, ಕಾಂಗ್ರೆಸ್ ಕಾರ್ಯತಂತ್ರ, ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಹೆಚ್ಚೆಂದು ಹೇಳಲಾಗಿತ್ತು.