ಬೆಳಗಾವಿ:ಒಂದು ದಿನದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗುವುದಿಲ್ಲ. ಮಹಾರಾಷ್ಟ್ರಕ್ಕೆ ಹೋಗಲು 10 ವರ್ಷ ಬೇಕು. ತಕ್ಷಣ ಹೋಗೋಕೆ ಅದೇನು ಡಬ್ಬಾ ಅಂಗಡಿ, ಚಹಾ ಅಂಗಡಿಯಾ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು. ವಿದ್ಯುತ್ ದರ ಇಳಿಸದಿದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದಾಗಿ ಬೆಳಗಾವಿ ಕೈಗಾರಿಕೋದ್ಯಮಿಗಳು ನೀಡಿರುವ ಎಚ್ಚರಿಕೆ ಬಗ್ಗೆ ಅವರು ಇಂದು ಪ್ರತಿಕ್ರಿಯೆ ನೀಡಿದರು.
ಒಂದು ಕೈಗಾರಿಕೆ ಆಗಲು ಹತ್ತು ವರ್ಷ ಬೇಕಾಗುತ್ತದೆ. ಅದಕ್ಕೆ ಎಷ್ಟು ಶ್ರಮ, ಎಷ್ಟು ದುಡ್ಡು ಆಗುತ್ತೆ, ಹಾಗೇ ಹೋಗಲು ಆಗಲ್ಲ. ನೋಡೋಣ ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಗೊಂದಲ ಇದೆ. ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚಾಗಿದೆ. ಏಕೆ ಹೆಚ್ಚಾಗಿದೆ ಎಂದು ಸಂಜೆಯೊಳಗೆ ತಿಳಿದುಕೊಂಡು ಹೇಳುತ್ತೇವೆ. ಕೆಇಆರ್‌ಸಿಯವರು 10 ಪರ್ಸೆಂಟ್ ಮಾತ್ರ ಹೆಚ್ಚು ಮಾಡಿದ್ದಾರೆ ಎಂದರು.
ಹಿಂದಿನ ಸರ್ಕಾರ ಮುಂದಿನ ಸರ್ಕಾರ ಅನ್ನೋ ಪ್ರಶ್ನೆ ಇಲ್ಲ, ಸರ್ಕಾರ ಸರ್ಕಾರವೇ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವೇ ಬೇರೆ ಇದೆ, ಅದಕ್ಕೂ ಪಕ್ಷಕ್ಕೂ ಏನೂ ಸಂಬಂಧ ಇಲ್ಲ. ಏಪ್ರಿಲ್ 1ರಂದು ಆದೇಶ ಆಗಿರಬಹುದು. ಚುನಾವಣೆ ಹಿನ್ನೆಲೆ ಜಾರಿಯಾಗಿಲ್ಲ ಅನಿಸುತ್ತೆ. ಈಗ ಎರಡ್ಮೂರು ತಿಂಗಳು ಸೇರಿಸಿ ವಿದ್ಯುತ್ ಬಿಲ್ ಕೊಟ್ಟಿರಬೇಕು ಅಂತಾ ನನ್ನ ಅಂದಾಜು. ಏಪ್ರಿಲ್, ಮೇ ತಿಂಗಳದ್ದು ಸೇರಿಸಿ ಬಿಲ್ ಕೊಟ್ಟಿರಬೇಕು ಎಂಬುದು ನನ್ನ ಭಾವನೆ. ನಾನು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಸಚಿವರು ಹೇಳಿದರು.
1980ರಿಂದ ಈಚೆಗೆ ಫೌಂಡ್ರಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ವಲಸೆ ವಿಚಾರ ವಿದ್ಯುತ್ ದರ ಏರಿಕೆಯಿಂದ ಹಾಗೆಲ್ಲ ಆಗಲ್ಲ, ಇದು ತಾತ್ಕಾಲಿಕ ಸಮಸ್ಯೆ ಅಷ್ಟೇ. ವಿದ್ಯುತ್ ದರ ಏರಿಕೆ ಕೇವಲ ಕರ್ನಾಟಕದ ಸಮಸ್ಯೆ ಅಲ್ಲ, ವಿದ್ಯುತ್ ದರ ಏರಿಕೆ ಇಡೀ ದೇಶದ ಆಯಾ ರಾಜ್ಯಗಳಲ್ಲಿ ಕಾಲಕ್ಕೆ ತಕ್ಕಂತೆ ಏರಿಸುತ್ತಾರೆ. ಇದು ಹೊಸದೇನಲ್ಲ, ಪ್ರತಿ ವರ್ಷ ಪರಿಷ್ಕರಣೆ ಮಾಡುತ್ತಾರೆ ಎಂದು ತಿಳಿಸಿದರು.