ಬೆಂಗಳೂರು: ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ. ನನ್ನ ಮೌನ ದೌರ್ಬಲ್ಯವಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಬೆಳಗಾವಿ ಜಿಲ್ಲೆ ಹಸ್ತಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸಿ, ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪವಾಗಿದೆ. ಈ ಹಿಂದೆ ಸಾಕಷ್ಟು ಬಾರಿ ಆಗಿದೆ. ನಾನು ಕೂಡ ಕಾಂಪ್ರಮೈಸ್ ಮಾಡಿಕೊಂಡಿದ್ದೇನೆ. ನಾನು ಅನುಸರಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.
ಪಕ್ಷದ ಹಿತದೃಷ್ಟಿಯಿಂದ ನಾನು ಹೊಂದಿಕೊಂಡು ಹೋಗುತ್ತಿದ್ದೇನೆ. ನಾನು ವರ್ಗಾವಣೆಗೆ ಶಿಫಾರಸು ಮಾಡಿದ್ದೆ. ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ನಿಗಮ, ಮಂಡಳಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಶಿಫಾರಸು ಮಾಡಿದ್ದೆ. ಕೇವಲ ಶಾಸಕರಿಗೆ ಮಾತ್ರ ಬೇಡ ಎಂದು ಹೇಳಿದ್ದೇನೆ. ಮಾಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
ನನ್ನ ಮೌನ ದೌರ್ಬಲ್ಯ ಅಲ್ಲವೇ ಅಲ್ಲ. ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಇದ್ದು ಸಕ್ಸಸ್ ಆಗಿದ್ದೇವೆ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ. ನಾವು ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನೂ ನಾವು ಸಂಭಾಳಿಸಿಕೊಂಡು ಹೋಗಬೇಕು. ನಾನು ಆರು ಬಾರಿ ಶಾಸಕನಾಗಿದ್ದೇನೆ. ಅವರು ಎರಡು ಬಾರಿ ಮಾತ್ರ ಶಾಸಕರಾಗಿದ್ದಾರೆ. ಕೆಲವರು ಒಂದೇ ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ. ಎಲ್ಲರ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು. ರಾಜ್ಯ ಪ್ರವಾಸ ಮುಂದೆ ಕೂಡ ಇರುತ್ತದೆ. ನಾವು ರಾಜ್ಯ ಪ್ರವಾಸ ಮಾಡಲು ಯಾವುದೇ ಅಡ್ಡಿಯಿಲ್ಲ. ಶಾಸಕರು ಕ್ಷೇತ್ರದ ಕೆಲಸ ಮಾತ್ರ ಅಲ್ಲ. ಒಟ್ಟಾಗಿ ಪ್ರವಾಸ ಕೂಡ ಮಾಡಬೇಕು. ಮುಂದೆ ಆ ಬಗ್ಗೆ ಪ್ಲಾನ್ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.