ಕರ್ನಾಟಕ

karnataka

ETV Bharat / state

ಸಾಮಾಜಿಕ ಭದ್ರತಾ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೆ ಇಎಸ್‍ಐ, ಪಿಎಫ್ ಸೌಲಭ್ಯ: ಸಚಿವ ಸಂತೋಷ್ ಲಾಡ್ - ​ ETV Bharat Karnataka

ಅಸಂಘಟಿತ ಕಾರ್ಮಿಕ ವಲಯದಲ್ಲಿ ಬರುವ ಟೈಲರ್ ವೃತ್ತಿ ಮಾಡುವವರ ಸಾಮಾಜಿಕ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು- ಸಚಿವ ಸಂತೋಷ್ ಲಾಡ್.

ಸಚಿವ ಸಂತೋಷ್ ಲಾಡ್
ಸಚಿವ ಸಂತೋಷ್ ಲಾಡ್

By ETV Bharat Karnataka Team

Published : Dec 5, 2023, 6:53 PM IST

ಅಸಂಘಟಿತ ಕಾರ್ಮಿಕ ವಲಯಗಳಿಗೆ ಇಎಸ್‍ಐ, ಪಿಎಫ್ ಸೌಲಭ್ಯ

ಬೆಳಗಾವಿ/ಬೆಂಗಳೂರು : ಅಸಂಘಟಿತ ಕಾರ್ಮಿಕ ವಲಯಗಳಿಗೆ ಇಎಸ್‍ಐ, ಪಿಎಫ್ ಸೇರಿದಂತೆ ಇತರೆ ಸೌಲಭ್ಯ ಒದಗಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಪ್ರಶ್ನೋತ್ತರ ವೇಳೆ ಶಾಸಕ ಗುರ್ಮೆ ಸುರೇಶ್‍ಶೆಟ್ಟಿ ಅವರು ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯದಲ್ಲಿ ರಾಜ್ಯಾದ್ಯಂತ 10 ಲಕ್ಷ ಟೈಲರ್ ವೃತ್ತಿ ಮಾಡುವವರಿದ್ದಾರೆ. ಅವರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 43 ಅಸಂಘಟಿತ ವಲಯಗಳಲ್ಲಿ ವಿವಿಧ ಕ್ಷೇತ್ರದ ಕಾರ್ಮಿಕರಿದ್ದಾರೆ. ಅವರಿಗೆ ಇಎಸ್‍ಐ, ಪಿಎಫ್‍ನಂತಹ ಸೌಲಭ್ಯಗಳನ್ನು ಒದಗಿಸಲು ಅವಕಾಶವಿಲ್ಲ ಎಂದು ಹೇಳಿದರು.

ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧು ಸವದಿ ಅವರು ಸಹ ಕಾರ್ಮಿಕ ಕಲ್ಯಾಣದ ಬಗ್ಗೆ ಪ್ರಶ್ನೆ ಕೇಳಿದರು. ಸಚಿವ ಸಂತೋಷ್ ಲಾಡ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್ ಸಂಗ್ರಹ ಮಾಡಲಾಗುತ್ತಿದೆ. ಅದರಡಿ ಕಲ್ಯಾಣ ಯೋಜನೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಉಳಿದಂತೆ ರಾಜ್ಯ ಸರ್ಕಾರ ಗಿಗ್ ಕ್ಷೇತ್ರದ ನೌಕರರಿಗೆ ವಿಮಾ ಯೋಜನೆ ಮತ್ತು ಇಎಸ್‍ಐ, ಪಿಎಫ್ ಸೌಲಭ್ಯ ಒದಗಿಸುತ್ತಿದೆ. ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 35 ರಿಂದ 40 ಲಕ್ಷ ನೌಕರರಿಗೂ ಸೌಲಭ್ಯ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳ ಕಾರ್ಮಿಕರಿಗೂ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಸ್ಪೀಕರ್ ಯು ಟಿ ಖಾದರ್ ಮಾತನಾಡಿ, ಗಾರ್ಮೆಂಟ್ಸ್, ವಾಹನ ಉತ್ಪಾದನೆ, ಖರೀದಿಯಂತಹ ಕ್ಷೇತ್ರಗಳಿಗೆ ಸೆಸ್ ಹಾಕಿ ಅದರಿಂದ ಬರುವ ಹಣವನ್ನು ಆಯಾ ಕ್ಷೇತ್ರದ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ ಮಾಡುವಂತೆ ಸಲಹೆ ನೀಡಿದರು. ಇದನ್ನು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.

ಇದನ್ನೂ ಓದಿ :ಅಬಕಾರಿ ಸಿಎಲ್ 7 ಪರವಾನಗಿ ಅಕ್ರಮ: ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ

ABOUT THE AUTHOR

...view details