ಕರ್ನಾಟಕ

karnataka

ETV Bharat / state

ಬೆಳಗಾವಿ ಅಧಿವೇಶನ ವೇಳೆ ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಹಂಡೆ ಹಾಲು ಕುಡಿದಂತಾಗಿದೆ: ಕಾರಜೋಳ

ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ - ಸಂತಸ ವ್ಯಕ್ತಪಡಿಸಿದ ಸಚಿವ ಕಾರಜೋಳ ಮತ್ತು ಬಿ ಸಿ ಪಾಟೀಲ್

ಕಾರಜೋಳ
ಕಾರಜೋಳ

By

Published : Dec 29, 2022, 4:59 PM IST

ಸದನದಲ್ಲಿ ಗೋವಿಂದ ಕಾರಜೋಳ

ಬೆಳಗಾವಿ: ಕಳಸಾ ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವರು ಅಭಿನಂದನೆ ತಿಳಿಸಿದರು.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ನಾಲೆ ಆಗಬೇಕೆಂದು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿಲ್ಲ ಅಂದಿದ್ದರೆ ಈ ಯೋಜನೆಗೆ ಮುಕ್ತಿ ಸಿಗುತ್ತಿರಲಿಲ್ಲ. ಅವರು ಆಡಳಿತಗಾರರು, ತಾಂತ್ರಿಕ ಪರಿಣಿತರು, ನೀರಾವರಿ ತಜ್ಞರು ಹೌದು. ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಇಡಿ ಡಿಪಿಆರ್‌ ಅನ್ನು ಪರಿಷ್ಕರಿಸಿದ್ದೇವೆ ಎಂದು ಹೇಳಿದರು.

ಜಲಾಶಯದ ಎತ್ತರಗಳನ್ನು ಕಡಿಮೆ ಮಾಡಿ ನಮಗೆ ನಿಗದಿಯಾಗಿರುವ ಕಳಸಾದಲ್ಲಿ 1.72 ಟಿಎಂಸಿ, ಬಂಡೂರಿಯಲ್ಲಿ 2.18 ಟಿಎಂಸಿ ಸೇರಿ ಒಟ್ಟು 3.9 ಟಿಎಂಸಿ ನೀರನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಪರಿಷ್ಕೃತ ಡಿಪಿಆರ್‌ ಅನ್ನು ಸಲ್ಲಿಸಿದ್ದೆವು. ಅದಾದ ಮೇಲೆ ಹತ್ತಾರು ಬಾರಿ ದಿಲ್ಲಿಗೆ ಹೋಗಿ ಬಂದಿದ್ದೇವೆ. ಮುಖ್ಯಮಂತ್ರಿಗಳು ಸ್ವತಃ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಅನೇಕ ಬಾರಿ ಭೇಟಿ ಮಾಡಿ ಈ ಯೋಜನೆಗೆ ಒಪ್ಪಿಗೆ ಪಡೆದುಕೊಂಡಿದ್ದೇವೆ ಎಂದರು.

ನಮ್ಮವರೇ ಆದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ನಮಗೆ ಜೊತೆ ಸಾಥ್‌ ನೀಡಿದ್ದರು. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೇ ಅಧಿವೇಶನ ನಡೆದಿರುವಾಗಲೇ ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಅನುಮತಿ ನೀಡಿರುವುದು ಸಂತೋಷವಾಗಿದೆ. ಇದಕ್ಕೆ ಕಾರಣರಾದ ನಾಯಕರು ಹಾಗೂ ಅಧಿಕಾರಿಗಳು, ಹೋರಾಟಗಾರರಿಗೆ ಅಭಿನಂದನೆ ತಿಳಿಸಿದರು.

ಕೃಷಿ ಸಚಿವ ಬಿ ಸಿ ಪಾಟೀಲ್ ಸಂತಸ:ಉತ್ತರ ಕರ್ನಾಟಕದ ಮಹಾತ್ವಾಕಾಂಕ್ಷೆ ಯೋಜನೆ ಕಳಸಾ ಬಂಡೂರಿಗೆ ಇಂದು ಕೇಂದ್ರ ಸರ್ಕಾರ ಡಿಪಿಆರ್ ಮಾಡಲು ಅನುಮತಿ ನೀಡಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಸುವರ್ಣಸೌಧ ಮುಂಭಾಗದಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಕಳಸಾ ಬಂಡೂರಿಗೆ ಇಂದು ಕೇಂದ್ರ ಸರ್ಕಾರ ಡಿಪಿಆರ್ ಮಾಡಲು ಅನುಮತಿ ನೀಡಿರುವುದು ಉತ್ತರ ಕರ್ನಾಟಕದ ಜನತೆಯ ದೃಷ್ಟಿಯಿಂದ ಸ್ವಾಗತಾರ್ಹ. ಈ ಬೇಡಿಕೆಗೆ ಆಗ್ರಹಿಸಿ ಅನೇಕ ಪ್ರತಿಭಟನೆ ನಡೆದಿದ್ದವು. ನಾನೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಯೋಜನೆಯಿಂದ ಉತ್ತರ ಕರ್ನಾಟಕದ ಜನತೆಗೆ ನೀರು ಸಿಗುತ್ತದೆ ಮತ್ತು ಈ ಭಾಗ ಇನ್ನಷ್ಟು ಅಭಿವೃದ್ಧಿ ಆಗಲಿದೆ. ಆದಷ್ಟು ಬೇಗ ಈ ಯೋಜನೆಯಿಂದ ನೀರು ಸಿಗುವಂತಾಗಲಿ ಎಂದು ತಿಳಿಸಿದರು.

ಈ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಕಳಸಾ - ಬಂಡೂರಿ ಯೋಜನೆಯು ಉತ್ತರ ಕರ್ನಾಟಕ ಭಾಗದ ಪ್ರತಿಷ್ಠೆಯ ಯೋಜನೆ. ಈ ಯೋಜನೆಗಾಗಿ ಸುಮಾರು ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. ಅಂತಾರಾಜ್ಯ ವ್ಯಾಜ್ಯವಾದ ಕಾರಣ ಸಾಕಷ್ಟು ಹೋರಾಟ ಮಾಡಬೇಕಾಯಿತು. 2018ರಲ್ಲಿ ನ್ಯಾಯಾಧೀಕರಣ ಅನುಮಾತಿ ನೀಡಿತ್ತು. ಇದೀಗ ಕನಸು ನನಸಾಗಲಿದೆ ಎಂದು ಹೇಳಿದರು.

ಕಳಸಾ ಬಂಡೂರಿ ಯೋಜನೆ:ಕುಡಿವ ನೀರಿನ ಈ ಯೋಜನೆಯು ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಗದಗ, ನರಗುಂದ ಭಾಗಕ್ಕೆ ತೀರ ಅವಶ್ಯಕವಾಗಿ ಬೇಕಾಗಿತ್ತು. ಇದಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಡಿಪಿಆರ್​ಗೆ ಅನುಮೋದನೆ ನೀಡಿದ್ದು, ಈ ಭಾಗದ ಜನರಿಗೆ ಸಂತಸ ಮೂಡಿಸಿದೆ.

(ಓದಿ: ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ)

ABOUT THE AUTHOR

...view details