ಕರ್ನಾಟಕ

karnataka

ETV Bharat / state

ಕಿಣಯೇ ಡ್ಯಾಂಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಭೇಟಿ: ಪರಿಶೀಲನೆ

ಕಿಣಯೇ ಡ್ಯಾಂ ಕಾಮಗಾರಿ ವೀಕ್ಷಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ತಿಂಗಳ ಕಾಲಮಿತಿಯೊಳಗೆ‌ ಕಾಮಗಾರಿ ಮುಕ್ತಾಯವಾಗಬೇಕು ಎಂದಿದ್ದಾರೆ.

Minister visit Kinaye Dyam
ಕಿಣಯೇ ಡ್ಯಾಂ ಕಾಮಗಾರಿ ವೀಕ್ಷಿಸಿದ ಜಲಸಂಪನ್ಮೂಲ ಸಚಿವ

By

Published : May 2, 2020, 10:01 PM IST

ಬೆಳಗಾವಿ: ಗ್ರಾಮೀಣ ಭಾಗಕ್ಕೆ ನೀರು ಕೊಡುವ ಉದ್ದೇಶದಿಂದ ನಿರ್ಮಾಣ ಮಾಡುತ್ತಿರುವ ಕಿಣಯೇ ಡ್ಯಾಂ ಕಾಮಗಾರಿಯನ್ನು ಒಂದು ತಿಂಗಳ ಕಾಲಮಿತಿಯೊಳಗೆ‌ ಮುಕ್ತಾಯ ಮಾಡುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಕಿಣಯೇ ಡ್ಯಾಂ ಕಾಮಗಾರಿ ವೀಕ್ಷಿಸಿ, ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕರ್ನಾಟಕ ನೀರಾವರಿ ನಿಗಮದಿಂದ ಡ್ಯಾಂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ ಎರಡು ಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ನಿರ್ಮಾಣ ಮತ್ತು ಭೂಸ್ವಾಧೀನಕ್ಕೆ 78 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಬರುವ ಮಳೆಗಾಲದ ಒಳಗೆ ಡ್ಯಾಂ ಕಾಮಗಾರಿ‌ ಮುಗಿಸಬೇಕು ಎಂದು ಮುಖ್ಯ ಅಭಿಯಂತರರಿಗೆ ಸೂಚಿಸಿದರು.

ಕಿಣಯೇ ಡ್ಯಾಂ ವ್ಯಾಪ್ತಿಯಲ್ಲಿ 10 ಕಿ.ಮೀ ಉದ್ದದ ಎರಡು ಕಾಲುವೆ ನಿರ್ಮಿಸಲಾಗುತ್ತಿದೆ. ಬಲದಂಡೆಯ ಕಾಲುವೆ 6 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕಿಣಯೇ, ರಣಕುಂಡೆ, ಸಂತಿಬಸ್ತವಾಡ, ವಾಘವಾಡೆ ಗ್ರಾಮಗಳ 2,300 ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಎಡದಂಡೆ ಕಾಲುವೆ 4 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕಿಣಯೇ ಮತ್ತು ಬಾದರವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 700 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ ಎಂದು ಸಚಿವರು ತಿಳಿಸಿದರು.

ಇದಲ್ಲದೇ ಒಂದು ಕಾಲುವೆ ವಾಘವಾಡೆ ಗ್ರಾಮದ ಕೆರೆಗೆ ಮುಕ್ತಾಯವಾಗಲಿದ್ದು, ಇನ್ನೊಂದು ಕಾಲುವೆ ಬಾದರವಾಡಿ ಗ್ರಾಮದ ಕೆರೆ ಪ್ರದೇಶ ಮುಟ್ಟಲಿದೆ. ಈ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕಾಗಿ ನಡೆಯಬೇಕು‌ ಎಂದು ಸಚಿವರು ಸೂಚಿಸಿದರು. ಭೂ ಸ್ವಾಧೀನಕ್ಕೆ ಅನುದಾನದ ಅಡಚಣೆ ಇಲ್ಲ. ರೈತರ ಮನವಿಯಂತೆ ಅಗತ್ಯವಿರುವ ಕಡೆ ರಸ್ತೆಗಳನ್ನು‌ ನಿರ್ಮಾಣ ಮಾಡಬೇಕು ಎಂದರು.

ABOUT THE AUTHOR

...view details