ಬೆಳಗಾವಿ: ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಈಗೀನಿಂದಲೇ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಲ ಸಂಪನ್ಮೂಲ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೋವಿಡ್-19 ನಿಯಂತ್ರಣ ಹಾಗೂ ನೆರೆ ಹಾವಳಿ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆ ಹಾವಳಿಗೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಉನ್ನತಮಟ್ಟದ ಸಮಿತಿ ರಚನೆಗೆ ಕ್ರಮ ಕೈಗೊಳ್ಳುವ ಮೂಲಕ ನೆರೆ ಹಾವಳಿ ಸವಾಲು ಎದುರಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಳ್ಳಾರಿ ನಾಲಾದಿಂದ ಕಳೆದ ಬಾರಿ ದೊಡ್ಡ ಅನಾಹುತ ಆಗಿದೆ. ಆದ್ದರಿಂದ ಬೃಹತ್ ಹಿಟಾಚಿ ಬಳಸಿಕೊಂಡು ನಾಲಾ ಸ್ವಚ್ಛತೆ ಕೈಗೊಳ್ಳಬೇಕು. ನಾಲಾ ಅತಿಕ್ರಮಣ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಮುಂದುವರಿಸಬೇಕು ಎಂದರು
ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಕ್ವಾರಂಟೈನ್ ಇರುವವರನ್ನು ವರದಿ ಬರುವ ಮುಂಚೆಯೇ ಮನೆಗೆ ಕಳಿಸಿದ್ದರಿಂದ ಕೆಲವು ಭಾಗಗಳಲ್ಲಿ ಸೋಂಕು ಹರಡಿದೆ. ಇದೀಗ ತಪಾಸಣೆ ಕಡಿಮೆಗೊಳಿಸಿದರೆ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಯಿದೆ. ಆದ್ದರಿಂದ ತಪಾಸಣೆ ಪ್ರಮಾಣ ಇನ್ನಷ್ಟು ಹೆಚ್ವಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಮಳೆಗಾಲ ಆರಂಭಗೊಂಡಿರುವುದರಿಂದ ರೈತರು ಹಾಗೂ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿ ವಹಿವಾಟು ಒಂದೇ ಕಡೆ ಆರಂಭಿಸಬೇಕು ಎಂದರು.