ಕರ್ನಾಟಕ

karnataka

ETV Bharat / state

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಸಚಿವ ರಮೇಶ್ ಜಾರಕಿಹೊಳಿ‌ ಸವಾಲು - ಸಚಿವ ರಮೇಶ್ ಜಾರಕಿಹೊಳಿ‌

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾನನಷ್ಟ ಮೊಕದ್ದಮೆ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

Minister Ramesh Jarkiholi
ರಮೇಶ್ ಜಾರಕಿಹೊಳಿ‌

By

Published : Jul 8, 2020, 2:03 PM IST

ಬೆಳಗಾವಿ:ಕುಕ್ಕರ್ ಹಂಚಿದ್ದು ಯಾರ ದುಡ್ಡಿಂದ ಎಂಬುದರ ಕುರಿತು ಆಣೆ ಪ್ರಮಾಣ ಮಾಡಲಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಸವಾಲು ಹಾಕಿದ್ದಾರೆ.

ರಮೇಶ್ ಜಾರಕಿಹೊಳಿ

ನಗರದ ಸಾಂಬ್ರಾ ವಿಮಾನ‌ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಲಿಂಗಾಯತ ಸಮುದಾಯದ ಒಳ್ಳೆಯ ಹೆಣ್ಣು ಮಗಳು ಎಂದುಕೊಂಡು ಉಪಕಾರ ಮಾಡಲಾಯಿತು. ಎಂಎಲ್ಎ ಚುನಾವಣೆಯಲ್ಲಿ ಯಾರ ಉಪಕಾರ ಇಲ್ಲದೆ ಆರಿಸಿ ಬಂದಿದ್ದಾಗಿ ಅವರು ಹೇಳುತ್ತಿದ್ದಾರೆ. ನನ್ನಿಂದ ಹಣದ ಸಹಾಯ ಪಡೆದಿಲ್ಲ ಎನ್ನುವುದಾದರೆ ಅವರ ಮನೆ ದೇವರು ವೀರಭದ್ರೇಶ್ವರ ಮೇಲೆ ಆಣೆ ಮಾಡಲಿ. ನಾನು ನನ್ನ ಮನೆ ದೇವರಾದ ಕೊಲ್ಲಾಪುರ ಲಕ್ಷ್ಮೀ ದೇವರ ಮೇಲೆ ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು‌ ಸವಾಲು ಹಾಕಿದರು.

ಕುಕ್ಕರ್ ಹೇಳಿಕೆಗೆ ಈಗಲೂ ಬದ್ಧವಿದ್ದೇನೆ. ಕಾನೂನು ಹೋರಾಟಕ್ಕೆ ಸೇರಿದಂತೆ ಎಲ್ಲದಕ್ಕೂ ಸಿದ್ಧವಿದ್ದೇನೆ. ವಾಸ್ತವಿಕ ಸ್ಥಿತಿಯನ್ನು ಪಕ್ಷದ ಕಾರ್ಯಕರ್ತರ ಮುಂದೆ ಇಟ್ಟಿದ್ದೇನೆ. ಅದರಲ್ಲೇನು ನಿಂದನೆ ಆಗುವಂತದ್ದಿಲ್ಲ. ಎಂಎಲ್ಎ ಚುನಾವಣೆಯಲ್ಲಿ ಅವರನ್ನು ನಾನೇ ಆರಿಸಿ ತಂದಿದ್ದು, ಅವರಿಗೆ ರಾಜಕಾರಣ ಗೊತ್ತಿಲ್ಲ. ನಮ್ಮ ರಣತಂತ್ರ ಏನೆಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.

ಮುಂಬೈ ಪ್ರಯಾಣ ಕುರಿತು ಮಾತನಾಡಿದ ಸಚಿವರು, ಮಹಾರಾಷ್ಟ್ರ ಹಾಗೂ ಕರ್ನಾಟಕ ಎಲ್ಲಾ ನೀರಾವರಿ ಯೋಜನೆಗಳ ಬಗ್ಗೆ ಇವತ್ತು ಮೊದಲ ಸಭೆ ಮಾಡಲಾಗುತ್ತಿದೆ. ರಾಜ್ಯದ ಕೃಷ್ಣ, ವೇದಗಂಗಾ, ದೂದಗಂಗಾ, ಚತ್ರಿ ನದಿ ಸೇರಿದಂತೆ ಇನ್ನಿತರ ನೀರಾವರಿ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆ ಆಗದಂತೆ ಶಾಶ್ವತ ಪರಿಹಾರ ಕೈಗೊಳ್ಳಲು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಗಡಿ ವಿಚಾರ ಸುಪ್ರೀಂಕೋಟ್​ನಲ್ಲಿ ಇರುವುದರಿಂದ ಈಗಾಗಲೇ ಮಹಾಜನ್ ವರದಿಯನ್ನು ಒಪ್ಪಿಸಲಾಗಿದೆ. ಅತೀ ಶೀಘ್ರದಲ್ಲೇ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮತ್ತು ಕರ್ನಾಟಕ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಮ್ಮೆ ಬೆಂಗಳೂರು ಅಥವಾ ಮುಂಬೈನಲ್ಲಿ ದೊಡ್ಡ ಪ್ರಮಾಣದಲ್ಲಿ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ABOUT THE AUTHOR

...view details