ಬೆಂಗಳೂರು/ಬೆಳಗಾವಿ: ರಾಜ್ಯದ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಅಕಾಲಿಕ ಮರಣದಿಂದ ಕಂಗಾಲಾಗಿರುವ ಕುಟುಂಬಗಳ ನೆರವಿಗೆ ಸಾರಿಗೆ ಸಂಸ್ಥೆ ಧಾವಿಸಿದ್ದು, 49 ಮೃತಾವಲಂಬಿತರಿಗೆ ಅನುಕಂಪದ ಆಧಾರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉದ್ಯೋಗ ನೀಡಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ವೇಳೆಯಲ್ಲಿಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ 49 ಮೃತಾವಲಂಬಿತರಿಗೆ ಕರ್ನಾಟಕ ರಾಜ್ಯ ಸಾರಿಗೆ ಪೇದೆ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾಂಕೇತಿಕವಾಗಿ 10 ಜನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು.
ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದ ನೂತನ ಸಿಬ್ಬಂದಿಗೆ ಶುಭ ಹಾರೈಸಿದರು. ಈ ಸಂದರ್ಭಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ನೂತನ ಸಿಬ್ಬಂದಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸಿಬ್ಬಂದಿಗೆ ಆರ್ಥಿಕ ಭದ್ರತೆ ಒದಗಿಸಿರುವ ಸಾರಿಗೆ ನಿಗಮಗಳು :ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳಿದ್ದು, ಎಲ್ಲ ನಿಗಮಗಳು ಸಿಬ್ಬಂದಿಗೆ ಆರ್ಥಿಕ ಭದ್ರತೆ ಒದಗಿಸಿವೆ. ದೇಶದ ರಸ್ತೆ ಸಾರಿಗೆ ನಿಗಮಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಬ್ಬಂದಿಗೆ ಒಂದು ಕೋಟಿ ರೂಪಾಯಿ ಅಪಘಾತ ಪರಿಹಾರ ವಿಮೆ ಕೆಎಸ್ಆರ್ಟಿಸಿ ಪರಿಚಯಿಸಿದೆ. ಇದರ ಜೊತೆಗೆ, ಅನುಕಂಪದ ಆಧಾರದಲ್ಲಿ ಉದ್ಯೋಗ ಭರವಸೆ ಕೂಡ ನೀಡಿರುವುದು ಸಿಬ್ಬಂದಿ ಬಗ್ಗೆ ಸಂಸ್ಥೆಗಿರುವ ಕಾಳಜಿ ಎದ್ದು ಕಾಣುತ್ತಿದೆ.
ಸಿಬ್ಬಂದಿಯ ಕುಟುಂಬಗಳ ಸುಭದ್ರತೆಗಾಗಿ ಕೆಎಸ್ಆರ್ಟಿಸಿ ಜಾರಿಗೊಳಿಸಿರುವ ಒಂದು ಕೋಟಿ ರೂ.ಗಳ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು,ಈ ಯೋಜನೆಯನ್ನು ಸದ್ಯದಲ್ಲೇ ಇತರ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಸೂಚಿಸುತ್ತೇನೆ. ಇದರಿಂದ ಬಿಎಂಟಿಸಿ, ವಾಯುವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಗೂ ಒಂದು ಕೋಟಿ ರೂ.ಗಳ ಅಪಘಾತ ವಿಮೆ ಸೌಲಭ್ಯ ಲಭ್ಯವಾಗಲಿದೆ ಎಂದು ಈ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು.
ಅದು ಪರಿಶೀಲನಾ ಹಂತದಲ್ಲಿದ್ದು ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಎಲ್ಲ ಸಾರಿಗೆ ನಿಗಮದ ಸಿಬ್ಬಂದಿಯೂ ಕೋಟಿ ರೂ.ಅಪಘಾತ ಪರಿಹಾರ ವಿಮಾ ವ್ಯಾಪ್ತಿಗೆ ಬರಲಿದ್ದಾರೆ. ಆದರೆ, ಇನ್ನು ಅದು ಪರಿಶೀಲನಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಸದ್ಯ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗುತ್ತಿದ್ದು ಅದರಂತೆ ಈಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 49 ಸಿಬ್ಬಂದಿ ಕುಟುಂಬಕ್ಕೆ ಉದ್ಯೋಗ ಕಲ್ಪಿಸಲಾಗಿದೆ.
ಇದನ್ನೂ ಓದಿ :ಅನುದಾನಿತ ಶಾಲಾ ಕಾಲೇಜು ನೌಕರರಿಗೂ ಜ್ಯೋತಿ ಸಂಜೀವಿನಿ ವಿಸ್ತರಣೆ ಕುರಿತು ಪರಿಶೀಲನೆ: ಸಿಎಂ ಸಿದ್ದರಾಮಯ್ಯ