ಚಿಕ್ಕೋಡಿ : ಈಗಾಗಲೇ ಕಾಗವಾಡ ತಾಲೂಕಿನಲ್ಲಿ ಮೂರು ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೋವಿಡ್ - 19 ಮುಂಜಾಗ್ರತೆ ಕ್ರಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳ ಹಾಗೂ ಮುಖಂಡರ ಸಭೆಯನ್ನು ನಡೆಸಿ ಮಾತನಾಡಿದ ಅವರು, ಕಾಗವಾಡ ತಾಲೂಕಿನಲ್ಲಿ ನಿನ್ನೆ ಮೂರು ಕೊರೋನಾ ಕೇಸ್ ಪತ್ತೆಯಾಗಿದ್ದರಿಂದ ಅಧಿಕಾರಿಗಳಿಂದ ಮಾಹಿತಿ ಪಡೆದು ಎಲ್ಲ ಅಧಿಕಾರಿಗಳು ಜಾಗೃತೆಯಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಅಧಿಕಾರಿಗಳ ಸಭೆ ನಡೆಸಿದ ಸಚಿವ ಶ್ರೀಮಂತ ಪಾಟೀಲ ಕಾಗವಾಡ ತಾಲೂಕಿನ ಶಿರಗುಪ್ಪಿ, ಮೋಳವಾಡ ಹಾಗೂ ಹಲವಾರು ಗ್ರಾಮದ ಜೈನ್ ಶ್ರಾವಕ - ಶ್ರಾವಕಿಯರು ಜಾರ್ಖಂಡ್ ನಲ್ಲಿರುವ ಜೈನ ಧರ್ಮೀಯರ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರಜಿಗೆ ತೆರಳಿದರು. ಅವರು ಶಿರಗುಪ್ಪಿಗೆ ಮರಳಿದ ಬಳಿಕ ಅವರನ್ನು ಶಿರಗುಪ್ಪಿಯ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಅವರನ್ನು ಪರೀಕ್ಷೆ ಮಾಡಿದಾಗ ಮೂರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರನ್ನು ಐಸೋಲೇಟ್ ಮಾಡಲು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ರವಾನಿಸಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಈಗಾಗಲೇ ಕರ್ನಾಟಕ - ಮಹರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಯಾರೂ ಅನವಶ್ಯಕವಾಗಿ ಹೊರಗಡೆ ತಿರುಗಾಡಬಾರದು ಎಂದು ಹೇಳಿದರು. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ ಸರ್ಕಾರದ ಆಜ್ಞೆಯನ್ನು ಪಾಲಿಸಿ, ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಹೇಳಿದರು.