ಅಥಣಿ(ಬೆಳಗಾವಿ): ಅಥಣಿ, ಕಾಗವಾಡ, ಕುಡಚಿ ಈ ಮೂರು ತಾಲೂಕುಗಳಿಗೂ ಸೇರಿರುವ ಅಥಣಿ ಪಟ್ಟಣದಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಉದ್ಘಾಟನೆಯನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ನೆರವೇರಿಸಿದರು.
ಅಥಣಿ ಪಟ್ಟಣದಲ್ಲಿ ನೂತನ ಆರ್ಟಿಓ ಕಚೇರಿ ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ ಇದೇ ವೇಳೆ ಅಥಣಿ ಆರ್ಟಿಓ ಕಚೇರಿಯಲ್ಲಿ ನೂತನವಾಗಿ ವಾಹನ ನೋಂದಣಿ ಮಾಡಿಕೊಂಡ ವಾಹನ ಮಾಲೀಕರಿಗೆ ಮತ್ತು ಚಾಲಕರಿಗೆ ಚಾಲನೆ ಪರವಾನಿಗೆ ಪತ್ರಗಳನ್ನು(ಸ್ಮಾರ್ಟ್ ಕಾರ್ಡ್) ವಿತರಿಸಿದರು
ಈ ಸಂದರ್ಭ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ಅಥಣಿ ಜನತೆಯ ಬಹುದಿನಗಳ ಬೇಡಿಕೆಯಾದ ಆರ್ಟಿಓ ಕಚೇರಿ ಸ್ಥಾಪನೆಯಾಗಿದೆ ಇದರಿಂದ ಅಥಣಿ, ಕಾಗವಾಡ ಹಾಗೂ ಕುಡಚಿ ತಾಲೂಕಿನ ಜನರು ದೂರದ ಚಿಕ್ಕೋಡಿಗೆ ಹೋಗುವುದು ತಪ್ಪಿದಂತಾಗಿದೆ. ಇನ್ನು ಮುಂದೆ ವಾಹನ ಚಾಲನೆ ಪರವಾನಿಗೆ ಪತ್ರಗಳನ್ನು ಅಥಣಿ ಕಚೇರಿಯಲ್ಲೇ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಕರ್ನಾಟಕ ರಾಜ್ಯದಲ್ಲಿ ರಾಜಸ್ವ ಸಂಗ್ರಹಣೆ ಇಲಾಖೆಗಳಲ್ಲಿ ಸಾರಿಗೆ ಇಲಾಖೆಯು ಕೂಡ ಅತ್ಯಂತ ಪ್ರಮುಖವಾಗಿದೆ. 2020-21ನೇ ಸಾಲಿಗಾಗಿ ಸಾರಿಗೆ ಇಲಾಖೆಗೆ 7115 ಕೋಟಿ ರೂಪಾಯಿ ರಾಜಸ್ವ ಗುರಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 2 ಕೋಟಿ 36 ಲಕ್ಷ ವಾಹನಗಳು ನೋಂದಣಿಯಾಗಿವೆ. ರಾಜ್ಯದಲ್ಲಿ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿರುವ 66 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳು ಆಧುನಿಕ ತಂತ್ರಜ್ಞಾನಗಳಾದ ವಾಹನ-4 ಹಾಗೂ ಸಾರಥಿ-4 ಗಳನ್ನು ಹೊಂದಿದ್ದು, ಇವುಗಳ ಸಹಾಯದಿಂದ ಕರ್ನಾಟಕ ಸಕಾಲ ಕಾಯ್ದೆಯಡಿಯಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲ ಸೇವೆಗಳನ್ನು ಆನ್ - ಲೈನ್ ಮೂಲಕ ಸಾರ್ವಜನಿಕರಿಗೆ ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ನೀಡುತ್ತಿದೆ.
ಸದರಿ ರಾಜಸ್ವ ಸಂಗ್ರಹಣೆಯನ್ನು ಆನ್ - ಲೈನ್ ಮೂಲಕ ಖಜಾನೆ -2 ತಂತ್ರಾಂಶದೊಂದಿಗೆ ಸಂಯೋಜಿಸಿ ರಾಜ್ಯದ ಬೊಕ್ಕಸಕ್ಕೆ ಹಣ ಸಂದಾಯವಾಗುವ ವಿನೂತನ ವ್ಯವಸ್ಥೆ ಕಲ್ಪಿಸಲಾಗಿದೆ. ಮೋಟಾರು ವಾಹನ ಕಾಯ್ದೆ ಹಾಗೂ ಅದರಡಿ ರಚಿತವಾದ ನಿಯಮಾವಳಿಗಳ ಉಲ್ಲಂಘನೆಗಾಗಿ 2019-20ನೇ ಸಾಲಿನಲ್ಲಿ 22, 86, 850 ವಾಹನಗಳನ್ನು ತಪಾಸಿಸಿ ತಪ್ಪಿತಸ್ಥ ವಾಹನಗಳ ಸಂಖ್ಯೆ : 2, 63, 344 ರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದರಿ ಪ್ರವರ್ತನ ಚಟುವಟಿಕೆಗಳಿಂದ ಒಟ್ಟು ತೆರಿಗೆ 130 ಕೋಟಿ ರೂಪಾಯಿಗಳಷ್ಟು ಹಾಗೂ ದಂಡದ ರೂಪದಲ್ಲಿ 76.09 ಕೋಟಿ ರೂಪಾಯಿಗಳಷ್ಟು ಸಂಗ್ರಹಿಸಲಾಗಿದ್ದು, ಈ ಪ್ರವರ್ತನ ಚಟುವಟಿಕೆಗಳಿಂದ ಸಾರಿಗೆ ಇಲಾಖೆಗೆ ಒಟ್ಟು 206.09 ಕೋಟಿಗಳಷ್ಟು ರಾಜಸ್ವ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಅಥಣಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ 67ನೇಯದಾಗಿ ಪ್ರಾರಂಭವಾಗುತ್ತಿದ್ದು, ಇದೂ ಕೂಡ ಎಲ್ಲಾ ಕಚೇರಿಗಳಂತೆ ಆಧುನಿಕ ತಂತ್ರಜ್ಞಾನ ಹೊಂದಿದೆ. ಸದರಿ ಕಚೇರಿ 2,75,000 ವಾಹನಗಳನ್ನು ಒಳಗೊಂಡಿದ್ದು, ಸುಮಾರು 25-30 ಕೋಟಿಗಳಷ್ಟು ರಾಜಸ್ವ ಸಂಗ್ರಹಣೆ ಗುರಿ ಹೊಂದಿದೆ. ಈ ಕಚೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮೋಟಾರು ವಾಹನ ನಿರೀಕ್ಷಕರು, ಕಚೇರಿ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಸೇರಿ ಒಟ್ಟು ಹದಿನೈದು ಜನ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.