ಬೆಳಗಾವಿ:ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಸಚಿವೆ ಡಿಸಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಅಭಯ ನೀಡಿದರು. ಸಾಂಬ್ರಾ ಮೂಲಕ ರಸ್ತೆ ಮಾರ್ಗವಾಗಿ ದಾಮಣೆ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಆಲಿಸಿದರು.
ಬಳಿಕ ಸಾಯಿನಗರದಲ್ಲಿ ಪಾಲಿಕೆಯಿಂದ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಅಲ್ಲಿರುವ ಮಹಿಳೆಯರ ಕಷ್ಟಗಳನ್ನು ಕೇಳಿದರು. ಅದರಲ್ಲಿ ಹಲವರ ಕೈ ಕುಲುಕಿ, ಅಪ್ಪಿಕೊಂಡು ಸಾಂತ್ವನ ಹೇಳಿದರು.
ನೆರೆಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಭೇಟಿ ಚಪ್ಪಾಳೆ ತಟ್ಟಿ ಸಚಿವರನ್ನು ಸ್ವಾಗತಿಸಿದ ಸಂತ್ರಸ್ತರು ತಮ್ಮ ನೋವನ್ನು ಹಂಚಿಕೊಂಡರು. ಎಲ್ಲರ ನೋವನ್ನು ಕೇಳಿದ ಸಚಿವೆ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು. ಬಳಿಕ ಸಚಿವರು ಮಾರ್ಕಾಂಡೇಯ ನದಿ ತೀರ ಪ್ರದೇಶ, ಸಂಕೇಶ್ವರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು.