ಬೆಳಗಾವಿ/ಬೆಂಗಳೂರು:ತಮ್ಮ ಜೀವನವನ್ನೇ ತ್ಯಾಗ ಮಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಚನಾನಂದ ಶ್ರೀಗಳೇ ಇರಲಿ ಅಥವಾ ಯಾರೇ ಇರಲಿ ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಬೇಕಾದ ಅಗತ್ಯವಿಲ್ಲ. ಇದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಹಳ ದೊಡ್ಡ ನಾಯಕರು. ಅವರ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ನಾವು ಯಾರ ಬಗ್ಗೆಯಾದರೂ ಮಾತನಾಡಿದರೆ ಅದಕ್ಕೊಂದು ತೂಕವಿರಬೇಕು. ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಹೀಗೆ ಮಾತನಾಡಿದರೆ ಅದು ನಮ್ಮ ಕೀಳು ಅಭಿರುಚಿಯನ್ನು ತೋರಿಸುತ್ತದೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ಸ್ವಾಮೀಜಿಗಳ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು. ಹಿಂದೂ ಸಮಾಜದಲ್ಲಿ ಖಾವಿ ಧರಿಸಿದವರಿಗೆ ಸಾಕಷ್ಟು ಗೌರವ ಕೊಡುತ್ತಾರೆ. ಪಂಚಮಸಾಲಿ ಸೇರಿದಂತೆ ಮತ್ತೊಂದು ಸಮಾಜದ ಧಾರ್ಮಿಕ ಮುಖಂಡರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದರು. ಯತ್ನಾಳ್ ದೊಡ್ಡವರ ಬಗ್ಗೆ ಮಾತನಾಡಿದರೆ ನಾನು ದೊಡ್ಡ ವ್ಯಕ್ತಿಯಾಗುತ್ತೇನೆ ಎಂದು ಭಾವಿಸಿದ್ದಾರೆ. ಶ್ರೀಗಳು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಹೆಚ್ಚಿನ ಮಹತ್ವ ಕೊಡಬಾರದು ಎಂದರು.
ಯಡಿಯೂರಪ್ಪ ಅತ್ಯಂತ ದೊಡ್ಡ ವ್ಯಕ್ತಿ : ಇಡೀ ದಕ್ಷಿಣ ಭಾರತದಲ್ಲೆ ಯಡಿಯೂರಪ್ಪ ಅತ್ಯಂತ ದೊಡ್ಡ ವ್ಯಕ್ತಿ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ದೊಡ್ಡದಿದೆ. ಆದರೆ ಯತ್ನಾಳ್ ತಾನು ಯಾರ ಬಗ್ಗೆ ಮಾತನಾಡಿ ಧಕ್ಕಿಸಿಕೊಳ್ಳಬಲ್ಲೆ ಎಂದುಕೊಂಡಿದ್ದಾರೆ. ಇವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ನಿರಾಣಿ ವ್ಯಂಗ್ಯವಾಡಿದರು.
ಸಮುದಾಯಕ್ಕೆ ಅವರ ಕೊಡುಗೆ ಸಾಕಷ್ಟಿದೆ: ಯಡಿಯೂರಪ್ಪನವರ ಬಗ್ಗೆ ಲಘುವಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ಎಂದೂ ವಿರೋಧಿಸಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಅದನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.