ಬೆಳಗಾವಿ :ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ಕೈಬಿಟ್ಟು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆಗೆ ಬರುವಂತೆ ಸಚಿವ ಮುರುಗೇಶ್ ನಿರಾಣಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದಲ್ಲಿ ಅತ್ಯಂತ ಕಡು ಬಡವರಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಹಿಂದೆ ನಮ್ಮ ಸರ್ಕಾರ ಇದ್ದಾಗ 2ಎ ಮೀಸಲಾತಿ ಸಿಗಬೇಕೆಂದು ಸಬ್ ಕಮಿಟಿ ರಚನೆ ಮಾಡಲಾಗಿತ್ತು. ಆ ಕಮಿಟಿಯಲ್ಲಿ ನಾನು, ಸಿಎಂ ಉದಾಸಿ, ಬಸವರಾಜ ಬೊಮ್ಮಾಯಿ ಸೇರಿ ಹಲವರಿದ್ದೆವು.
ಇಂದು ಪ್ರತಿಭಟನೆ ಮಾಡುತ್ತಿರುವ ನಮ್ಮ ಸಹೋದರರು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಬಹುದಿತ್ತು. ಪಂಚಮಸಾಲಿ ಸಮುದಾಯಕ್ಕೆ 2ಎ ಸೇರ್ಪಡೆಗೆ 10 ವರ್ಷದ ಹಿಂದೆ ಹೋರಾಟ ಆರಂಭಿಸಿದವನೇ ನಾನು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು. ಬೇರೆ ಸಮುದಾಯಕ್ಕೆ ತೊಂದರೆಯೂ ಆಗಬಾರದು.
ಈ ನಿರ್ಧಾರ ಕೈಗೊಳ್ಳಲು ಸಮಯ ಬೇಕು. ಸಿಎಂ ಗಮನಕ್ಕೂ ತಂದಿದ್ದೇನೆ. ಕೇಂದ್ರದ ಸಚಿವರಿಗೂ ಮನವಿ ಮಾಡಿದ್ದೇನೆ. ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ, ಪಾದಯಾತ್ರೆ ಕೈ ಬಿಡಲು ಮನವಿ ಮಾಡುತ್ತಿದ್ದೇನೆ. ಹೋರಾಟ, ಪಾದಯಾತ್ರೆ ಸ್ಥಗಿತಗೊಳಿಸಿ ಮಾತುಕತೆಗೆ ಬರಬೇಕು. ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ವೈರಿನಾ, ಅವರು ನಮ್ಮ ಸಮಾಜದ ಹಿರಿಯರು.
ಶಿವಶಂಕರ್, ಕಾಶಪ್ಪನವರ್, ಯತ್ನಾಳ್ ಎಲ್ಲರೂ ನಮ್ಮ ಸಹೋದರರು. ನಾವೆಲ್ಲರೂ ಬೇರೆ ಬೇರೆ ಪಕ್ಷದಲ್ಲಿರಬಹುದು. ಆದ್ರೆ, ಎಲ್ಲರೂ ಒಂದೇ ಸಮುದಾಯದವರು. ರಾಜಕೀಯವಾಗಿ ಈ ಹೋರಾಟ ವಿಷಯಾಂತರ ಆಗಬಾರದು. ದಯವಿಟ್ಟು ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡ್ತೇನೆ. ಪಂಚಮಸಾಲಿ ಪೀಠದ ಇಬ್ಬರು ಶ್ರೀಗಳು ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದರು.