ಚಿಕ್ಕೋಡಿ: ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬೆಳಗಾವಿ ಜಿಲ್ಲೆಯ ಸಂಕೇಶ್ವರನಲ್ಲಿರುವ ಗೋದಾಮಿಗೆ ಸಚಿವರು ಇಂದು ದಿಢೀರ್ ಭೇಟಿ ನೀಡಿ ಅಕ್ಕಿ ಹಾಗೂ ಗೋಧಿಯನ್ನು ಪರಿಶೀಲಿಸಿದರು. ಅಕ್ಕಿ ಚೀಲವನ್ನು ತೂಕದ ಯಂತ್ರದ ಮೇಲಿಟ್ಟು ತೂಕ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಂಕೇಶ್ವರನಲ್ಲಿರುವ ಎರಡು ಗೋದಾಮಿನ ಸ್ವಚ್ಛತೆ ಮತ್ತು ದಾಸ್ತಾನು ಅಚ್ಚುಕಟ್ಟಾಗಿದೆ. ಗೋಧಿ ಹಿಟ್ಟು ಸೇರಿದಂತೆ ಎಫ್‌ಸಿಐನಿಂದ ಬಂದಿರುವ ಅಕ್ಕಿಯ ಪ್ರಮಾಣದ ಸಂಪೂರ್ಣ ಮಾಹಿತಿ ಇದೆ ಎಂದರಲ್ಲದೆ, ಹೊಸ ಪಡಿತರ ಚೀಟಿ ಪಡೆಯಲು ಲೋಪದೋಷ ಇರುವ ಕೆಲವು ಮಾಹಿತಿಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ನೀಡಿದ್ದಾರೆ. ಅದನ್ನು ಲಿಖಿತ ರೂಪದಲ್ಲಿ ಸ್ವೀಕರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಸಾರ್ವಜನಿಕರಲ್ಲಿ, ಗ್ರಾಹಕರಲ್ಲಿ ಒತ್ತಾಯಪೂರ್ವಕವಾಗಿ ಇನ್ಸ್‌ಪೆಕ್ಟರ್, ಶಿರಸ್ತೇದಾರ್ ಸೇರಿದಂತೆ ಆಹಾರ ಗ್ರಾಹಕ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಣ ಪಡೆಯುವುದು ಕಂಡಲ್ಲಿ ಶಿಸ್ತು ಕ್ರಮ ಜರುಗಿಸಿ ಅಮಾನತು ಮಾಡಲಾಗುವುದು ಎಂದರು.
ಸಾರ್ವಜನಿಕರಿಗೆ, ಗ್ರಾಹಕರಿಗೆ ಉಚಿತವಾಗಿ ನೀಡುವ ಪಡಿತರವನ್ನು ಸಮರ್ಪಕವಾಗಿ ನೀಡಬೇಕು ಅಧಿಕಾರಿ, ಸಿಬ್ಬಂದಿಗಳಿಂದ ಲೋಪದೋಷ ಉಂಟಾಗಿದ್ದಲ್ಲಿ ಗೋದಾಮಿನಲ್ಲಿ ತೊಂದರೆ ಇದ್ದರೆ ತಾಲೂಕು ಸೊಸೈಟಿಯವರಿಗೆ ತೊಂದರೆ ಇದ್ದರೆ ಪಿಡಿಎಸ್ ಮಾಲೀಕರಿಗೆ ತೊಂದರೆ ಇದ್ದಲ್ಲಿ ಆಯಾ ಭಾಗದ ಸಾರ್ವಜನಿಕರು ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಬಂದರೆ ಕ್ರಮ ಜರುಗಿಸಿ, ಪರಿಹಾರ ಸೂಚಿಸಲಾಗುವುದು ಎಂದು ಹೇಳಿದರು.
ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು. ಶಹಪುರದಲ್ಲಿ ಆಗಿರುವ ಘಟನೆಗೆ ಈಗಾಗಲೇ ಶಿಸ್ತಿನ ಕ್ರಮ ತೆಗೆದುಕೊಂಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಕುಂದುಕೊರತೆ ಆಗದಂತೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.