ಕರ್ನಾಟಕ

karnataka

ETV Bharat / state

ಖಾಸಗಿ ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ: ಮನವಿ ಸ್ವೀಕರಿಸಿದ ಸಚಿವ‌‌ ಮುನಿಯಪ್ಪ - ​ ETV Bharat Karnataka

ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ 15 ದಿನಗಳೊಳಗೆ ನಮ್ಮ ಜೊತೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಬೇಕು ಎಂದು ರುಪ್ಸಾ ಕರ್ನಾಟಕ ರಾಜ್ಯ ನಿರ್ದೇಶಕಿ ಅಕ್ಕಮಹಾದೇವಿ ಕುಂಬಾರ ಹೇಳಿದ್ದಾರೆ.

ರುಪ್ಸಾ ವತಿಯಿಂದ ಪ್ರತಿಭಟನೆ
ರುಪ್ಸಾ ವತಿಯಿಂದ ಪ್ರತಿಭಟನೆ

By ETV Bharat Karnataka Team

Published : Dec 11, 2023, 10:25 PM IST

ಬೆಳಗಾವಿ : ಖಾಸಗಿ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಹೈಕೋರ್ಟ್ ಆದೇಶದಂತೆ ಕನಿಷ್ಠ 10 ವರ್ಷಗಳಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಸುವರ್ಣ ಗಾರ್ಡನ್ ಬಳಿಯ ಟೆಂಟ್​ನಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸಾ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶೈಕ್ಷಣಿಕ ವರ್ಷದಲ್ಲಿ 2017-18ರ ಮುಂಚೆ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳಿಗೆ ಫೈಯರ್‌ ಸೆಫ್ಟಿ, ಬಿಲ್ಡಿಂಗ್‌ ಸೆಪ್ಟಿ, ಭೂ ಪರಿವರ್ತನೆ ನಿಯಮದಿಂದ ಕೋರ್ಟ ಆದೇಶದಂತೆ ವಿನಾಯಿತಿ ನೀಡಬೇಕು. ಆರ್‌ಟಿಇ ಮರುಪಾವತಿ ಹಣ ಶಾಲೆಯ ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 35 ಸಾವಿರಕ್ಕೆ ಹೆಚ್ಚಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ-2020 ಕರ್ನಾಟಕದಲ್ಲಿ ಅನುಷ್ಠಾನಗೊಳಿಸಬೇಕು. 1995 ರಿಂದ 2010ವರೆಗೆ ಪ್ರಾರಂಭವಾದ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಹಾಗೂ ಆರ್‌ಟಿಇ ಮರು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರುಪ್ಸಾ ಕರ್ನಾಟಕ ರಾಜ್ಯ ನಿರ್ದೇಶಕಿ ಅಕ್ಕಮಹಾದೇವಿ ಕುಂಬಾರ, ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಸರ್ಕಾರಿ ಶಾಲೆಗಳಿಗೆ ಒಂದು ನೀತಿ, ಖಾಸಗಿ ಶಾಲೆಗಳಿಗೆ ಮತ್ತೊಂದು ನೀತಿ ಅನುಸರಿಸುತ್ತಿದೆ. ಆರ್​ಟಿಇ ಮತ್ತೆ ಆರಂಭಿಸಿ, ಮೊತ್ತವನ್ನು ಹೆಚ್ಚಿಸಬೇಕು. ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ 15 ದಿನಗಳೊಳಗೆ ನಮ್ಮ ಜೊತೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ಈ ಬಗ್ಗೆ ಸಂಪೂರ್ಣ ಪತ್ರ ಬರೆದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಖಾಸಗಿ ಅನುದಾನರಹಿತ ಶಾಲೆಗಳಿಗೆ ನ್ಯಾಯ ಕೊಡಿಸಲಾಗುವುದು ಎಂದು ಭರವಸೆ ನೀಡಿದರು‌. ಪ್ರತಿಭಟನೆಯಲ್ಲಿ ಡಾ. ಹಾಲನೂರು ಲೇಪಾಕ್ಷ, ಶಶಿಧರ ದಿಂಡೂರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರಥಮ ಚಿಕಿತ್ಸಕರ ಪ್ರತಿಭಟನೆ :ಮತ್ತೊಂದೆಡೆರಾಜ್ಯದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಥಮ ಚಿಕಿತ್ಸಾ ವೈದ್ಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಥಮ ಚಿಕಿತ್ಸಾ ವೈದ್ಯರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಕೆ.ಹೆಚ್ ಮುನಿಯಪ್ಪ, ಡಾ.ಶರಣಪ್ರಕಾಶ ಪಾಟೀಲ ಪ್ರತಿಭಟನಾ ನಿರತರಿಂದ ಮನವಿ‌ ಸ್ವೀಕರಿಸಿದರು.

ದೇಶದಲ್ಲಿ ಶೇ.60ರಷ್ಟಿ ಹಳ್ಳಿಗಳಿದ್ದರೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆದರೂ ನಾವು ಅಲ್ಲಿಗೆ ತೆರಳಿ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದೇವೆ. ಸರ್ಕಾರ ನಮ್ಮ ರಕ್ಷಣೆಗಾಗಿ ಟಾಸ್ಕ್ ಪೋಸ್೯ ಕಾರ್ಯಾಚರಣೆ ನಿಲ್ಲಿಸಬೇಕು. ಆಂಧ್ರಪ್ರದೇಶದ ಮಾದರಿಯಲ್ಲಿ ನಮಗೂ ಸೇವೆ ಸಲ್ಲಿಸಲು ಮನ್ನಣೆ ನೀಡಬೇಕು‌. ಸರ್ಕಾರಿ ಸೇವೆಗೆ ನಮ್ಮ ಪ್ರಥಮ ಚಿಕಿತ್ಸಕರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಹಾಗೂ ಪ್ರಥಮ ಚಿಕಿತ್ಸಕರಿಗೂ ಸೂಕ್ತ ತರಬೇತಿ ವ್ಯವಸ್ಥೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸಾರ್ವತ್ರಿಕ ಆರೋಗ್ಯ ಆಂದೋಲನ ಸಂಘಟನೆ ವತಿಯಿಂದ ಧರಣಿ :ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ, ಉಚಿತ ಔಷಧಿ ಲಭ್ಯತೆ, ಸಿಬ್ಬಂದಿ ಕೊರತೆ ನೀಗಿಸುವುದು ಸೇರಿ‌ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಡಾ. ಕಿರಣ ಬೇಡಿ, ನಮ್ಮ ಕ್ಲಿನಿಕ್ ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾತ್ರಿ 9 ಗಂಟೆವರೆಗೆ ತೆರೆದಿರಬೇಕು. ಆರೋಗ್ಯ ಇಲಾಖೆಯಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಸಾರ್ವಜನಿಕ ಆರೋಗ್ಯ ಆಸ್ಪತ್ರೆಗಳ ಖಾಸಗೀಕರಣದ ಪ್ರಸ್ತಾವನೆ ಹಿಂಪಡೆಯಬೇಕು. ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಬೇಕು. ಎಚ್ಐವಿ ಸೋಂಕಿತರಿಗೆ ಪೌಷ್ಠಿಕಾಂಶದ ಆಹಾರದ ಪೂರಕಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಪ್ರಥಮ ಚಿಕಿತ್ಸಕರು ಹಲವು ಬೇಡಿಕೆ ಇಟ್ಟಿದ್ದು, ಅವುಗಳನ್ನು ಆರೋಗ್ಯ ಸಚಿವರ ಗಮನಕ್ಕೆ ತರುತ್ತೇನೆ. ಇನ್ನು ಆರೋಗ್ಯ ಇಲಾಖೆಯಲ್ಲಿನ ನ್ಯೂನತೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಅವುಗಳು ನ್ಯಾಯಯುತವಾಗಿದ್ದು, ಸರ್ಕಾರ ಇವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದ ಅವರು, ಉತ್ತರ ಕರ್ನಾಟಕದ ಬಗ್ಗೆ ನಮ್ಮ ಸರ್ಕಾರಕ್ಕೆ ಕಾಳಜಿಯಿದೆ. ಉತ್ತರ ಕರ್ನಾಟಕ, ಬರಗಾಲ ಸಂಬಂಧ ಉಪಯುಕ್ತ ಚರ್ಚೆಯಾಗಿದೆ ಎಂದರು.

ಇದನ್ನೂ ಓದಿ :ಬಿಜೆಪಿ ಸದಸ್ಯರ ಧರಣಿ ನಡುವೆಯೇ 5 ವಿಧೇಯಕಗಳಿಗೆ ಅಂಗೀಕಾರ ನೀಡಿದ ವಿಧಾನಸಭೆ

ABOUT THE AUTHOR

...view details