ಬೆಳಗಾವಿ: ಕುರಿ ಕಾಯುವ ವೃತ್ತಿಯಲ್ಲಿರುವ ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡದ ಜಾತಿಗಳ ಪಟ್ಟಿಗೆ ಸೇರಿಸಲು ಸರ್ಕಾರ ಉತ್ಸುಕವಾಗಿದೆ. ಈ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರನ್ನು ಭೇಟಿಯಾಗಿ ಚರ್ಚಿಸಲು ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ದೆಹಲಿಗೆ ತೆರಳಲಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಸಚಿವರು, ಈ ಮೊದಲು ಹಿಂದುಳಿದ ಬುಡಕಟ್ಟು (ಬಿಟಿ) ಗಳ ಪಟ್ಟಿಯಲ್ಲಿದ್ದ ಕಾಡುಗೊಲ್ಲ ಹಾಗೂ ವಾಲ್ಮೀಕಿನಾಯಕ ಜಾತಿಗಳ ಪೈಕಿ ವಾಲ್ಮೀಕಿನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಾಗ ಕಾಡುಗೊಲ್ಲರನ್ನು ಪ್ರವರ್ಗ 1 ರಲ್ಲಿ ಮುಂದುವರೆಸಲಾಯಿತು ಎಂದರು.
ನಂತರ ಮಾತನಾಡಿ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಗತ್ಯವಿದ್ದ ಕುಲಶಾಸ್ತ್ರ ಅಧ್ಯಯನ ಕೈಗೊಳ್ಳಲು ಮಾನವಶಾಸ್ತ್ರಜ್ಞರಾದ ಅನ್ನಪೂರ್ಣಮ್ಮ ನೇತೃತ್ವದ ಸಮಿತಿ ರಚಿಸಲಾಯಿತು. ಅವರು ನೀಡಿದ ವರದಿ ಆಧರಿಸಿ 2014 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು. ಕುಲಶಾಸ್ತ್ರ ಅಧ್ಯಯನದ ಕೆಲವು ಅಂಶಗಳಲ್ಲಿ ಕಾಡುಗೊಲ್ಲರ ಕೆಲವು ಆಚರಣೆಗಳು ಎಸ್ಟಿಗೆ ಸೇರ್ಪಡೆ ಮಾಡಲು ಪೂರಕವಾಗಿಲ್ಲ ಎಂದು ಕೇಂದ್ರ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು ಎಂದು ತಿಳಿಸಿದರು.