ಬೆಂಗಳೂರು:ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ರೂಪಿಸಿರುವ ನಿಯಮಗಳಲ್ಲಿ ಪರಿಷ್ಕರಣೆ ಮಾಡುವ ಕುರಿತು ಇನ್ನೊಂದು ವಾರದಲ್ಲಿ ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಇಂದು ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ರೂಪಿಸಿರುವ ನಿಯಮಗಳಲ್ಲಿ ತಾರತಮ್ಯ ಪರಿಹರಿಸುವಂತೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಬಡ್ತಿ ವೇಳೆ ಅಗತ್ಯ ತರಬೇತಿ ನೀಡುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಬಡ್ತಿಗೆ ಪರೀಕ್ಷೆ ಬರೆಯಬೇಕು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. 2014ರ ಸಿ ಆ್ಯಂಡ್ ಆರ್ ರೂಲ್ ಬದಲಾವಣೆ ಸೇರಿದಂತೆ ಬಡ್ತಿ ಸಂದರ್ಭದಲ್ಲಿ ಶಿಕ್ಷಕರು ಪರೀಕ್ಷೆ ಬರೆಯುವ ಪದ್ದತಿ ರದ್ದುಪಡಿಸುವ ಕುರಿತು ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ಹೆಜ್ಜೆ ಇಡುತ್ತೇವೆ ಎಂದರು.
ಅನುಪಾತದ ವಿಚಾರದ ಬಗ್ಗೆ ಈಗ ಭರವಸೆ ನೀಡಲ್ಲ, ಚರ್ಚಿಸುವಾಗ ಇದನ್ನೂ ಪರಿಗಣಿಸೋಣ. ಡಿಸೆಂಬರ್15ರೊಳಗೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ ನಿರ್ಧರಿಸೋಣ. ಮಕ್ಕಳಿಗೆ ಅನುಕೂಲಕರವಾದ ಬದಲಾವಣೆಗೆ ನಾವು ಸಿದ್ದರಿದ್ದೇವೆ, ಶಿಕ್ಷಕರ ಪರವಾಗಿರುತ್ತೇನೆ. ಬರೀ ಅಧಿಕಾರಿಗಳೇ ಇಲಾಖೆ ನಡೆಸುತ್ತಾರೆ ಎನ್ನುವುದನ್ನು ಮನಸ್ಸಿನಿಂದ ತೆಗೆದುಹಾಕಿ, ನಾವೆಲ್ಲಾ ಸೇರಿ ಆಡಳಿತ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ವಿ.ವಿಗಳ ಮೂಲಸೌಕರ್ಯ ಕೊರತೆ ನೀಗಿಸಲು ಸಿಎಂ ಜೊತೆ ಸಭೆ:ಪ್ರಾದೇಶಿಕ ಅಸಮತೋಲನ ನಿರ್ಮೂಲನೆ ಮಾಡುವ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ವಾರ್ಷಿಕ ನೋಂದಣಿ ಅನುಪಾತ ಸುಧಾರಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.