ಬೆಳಗಾವಿ: ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರನ್ನು ಸಿಎಂ ಸಮಾಧಾನ ಮಾಡಲಿದ್ದಾರೆ. ವೈಯಕ್ತಿಕ ಕೆಲಸಕ್ಕೆ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡುತ್ತಿರಬಹುದು. ಬೇರೆ ಪಕ್ಷದ ನಾಯಕರ ಜತೆಗೆ ಮಾತನಾಡಿದ್ರೆ ತಪ್ಪೇನು. ಕತ್ತಿ ಅವರೇನು ಪಾಕಿಸ್ತಾನದವರೇ ಎಂದು ಸಚಿವ ಲಕ್ಷ್ಮಣ ಸವದಿ ಪ್ರಶ್ನಿಸಿದರು.
ಕತ್ತಿ ಏನು ಪಾಕಿಸ್ತಾನದವರೇ? ಸಿದ್ದರಾಮಯ್ಯನವರನ್ನು ಭೇಟಿ ಆದ್ರೆ ತಪ್ಪೇನು?: ಸವದಿ
ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನವನ್ನು ಸಿಎಂ ಹಾಗೂ ಪಕ್ಷದ ನಾಯಕರು ಬಗೆಹರಿಸುತ್ತಾರೆ. ಈ ಸರ್ಕಾರ 3 ವರ್ಷ 10 ತಿಂಗಳು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವ ಲಕ್ಷ್ಮಣ ಸವದಿ .
ಗೋಕಾಕ್ ನಗರದಲ್ಲಿ ಪುನರ್ವಸತಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಮೇಶ್ ಕತ್ತಿ, ಸಿದ್ದರಾಮಯ್ಯ ಭೇಟಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾನೂ ಕೂಡ ಎಲ್ಲ ಪಕ್ಷದ ನಾಯಕರ ಜತೆಗೆ ಮಾತಾಡುತ್ತೇನೆ. ಹಾಗೇ ಕತ್ತಿ ಅವರೂ ಎಲ್ಲರ ಜತೆಗೆ ಮಾತಾಡುತ್ತಾರೆ. ರಾಜಕಾರಣದಲ್ಲಿ ಬೇರೆ ಪಕ್ಷದ ನಾಯಕರ ಜತೆಗೆ ಮಾತನಾಡಬಾರದಾ? ಬರೀ ನಮ್ಮ ಪಕ್ಷದ ಮುಖಂಡರ ಜತೆಗಷ್ಟೇ ಮಾತನಾಡಬೇಕಾ? ವೈಯಕ್ತಿಕ ಕೆಲಸದ ಕಾರಣ ಕತ್ತಿ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡುತ್ತಿರಬಹುದು. ಇಬ್ಬರು ನಾಯಕರ ಭೇಟಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯತೆಯಿಲ್ಲ. ಉಮೇಶ್ ಕತ್ತಿ ಜತೆಗೆ ನಾನು ದಿನಾಲು ಮಾತನಾಡುತ್ತೇನೆ. ಉಮೇಶ್ ಕತ್ತಿ ಅವರೇನು ಪಾಕಿಸ್ತಾನದವರೇ? ನಾವೆಲ್ಲ ಒಂದೇ ಕುಟುಂಬದವರು. 25 ವರ್ಷದಿಂದ ರಾಜಕೀಯ ಸ್ನೇಹಿತರು ಎಂದರು.