ಬೆಳಗಾವಿ : ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.
ಸಂತ್ರಸ್ತ ಮಹಿಳೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಯಾವುದೇ ಕಾರಣಕ್ಕೂ ಧೃತಿಗೆಡದಂತೆ ಧೈರ್ಯ ಹೇಳಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದೊಂದು ಅಮಾನವೀಯ ಹೇಯಕೃತ್ಯ. ಇಡೀ ಸಮಾಜವೇ ತಲೆತಗ್ಗಿಸುವ ಘಟನೆ. ಇಂತಹ ಘಟನೆಗಳು ಸಮಾಜದಲ್ಲಿ ಮತ್ತೆ ಮರುಕಳಿಸಬಾರದು. ಈಗಾಗಲೇ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದರು.
ಸಂತ್ರಸ್ತ ಮಹಿಳೆ ಹೆದರಿಕೊಂಡಿದ್ದಾರೆ : ಇಂತಹ ಘಟನೆ ನನ್ನ ಜಿಲ್ಲೆಯಲ್ಲಾಗಿದ್ದು, ನಾನು ತಲೆತಗ್ಗಿಸುವಂತಹ ಘಟನೆ. ಆರೋಪಿಗಳಿಗೆ ಶಿಕ್ಷೆಯಾಗಲು ನಾನು ಕೂಡಾ ಹೋಮ್ ಮಿನಿಸ್ಟರ್‌ಗೆ ಮನವಿ ಮಾಡುತ್ತೇನೆ. ಘಟನೆಯಿಂದಾಗಿ ಸಂತ್ರಸ್ತ ಮಹಿಳೆ ಹೆದರಿಕೊಂಡಿದ್ದಾರೆ. ಹೆಣ್ಮಕ್ಕಳಿಗೆ ಮರ್ಯಾದೆ ಪ್ರಶ್ನೆ ಬಂದಾಗ ಸಹಜವಾಗಿಯೇ ಹೆದರುತ್ತಾರೆ. ಅವರ ಜತೆಗೆ ನಮ್ಮ ಸರ್ಕಾರ ಹಾಗೂ ನಾನಿದ್ದೇನೆ ಎಂದು ಧೈರ್ಯ ಹೇಳಿದ್ದೇನೆ. ಇನ್ಮೇಲೆ ಇಂತಹ ಘಟನೆಗಳು ಜರುಗದಂತೆ ನೋಡಿಕೊಳ್ಳಲು 'ಸಖಿ ಒನ್' ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.