ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಣ್ಣ ಖಾತೆಯಲ್ಲ. ಈ ಮೊದಲು ಇದನ್ನು ಕೆಳಮಟ್ಟದಲ್ಲಿ ನೋಡಲಾಗುತ್ತಿತ್ತು. ಈಗ ವಿಶ್ವವೇ ಅದರತ್ತ ತಿರುಗಿ ನೋಡುವಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿಂದು ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಇಲಾಖೆಯ ವಿವಿಧ ನೂತನ ಸಂಸ್ಥೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಭಾಯಿಸುವ ಭಾಗ್ಯ ನನಗೆ ಸಿಕ್ಕಿದೆ. ನಿಜವಾಗಿಯೂ ಪುಣ್ಯದ ಕೆಲಸ ಇದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಂದಾಗಿ ಇಂತಹ ಅವಕಾಶ ನನಗೆ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯಿಂದಾಗಿ ಈ ಇಲಾಖೆಯ ಕಡೆಗೆ ವಿಶ್ವವೇ ನೋಡುವಂತಾಗಿದೆ ಎಂದರು.
ಹಳ್ಳಿಯಲ್ಲಿ ಹುಟ್ಟಿ, ಸರ್ಕಾರಿ ಬಸ್ಗಳಲ್ಲಿ ಓಡಾಡಿ, ಸರ್ಕಾರಿ ಶಾಲೆಯಲ್ಲಿ ಕಲಿತು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ನಾನು 3ನೇ ತರಗತಿಯಲ್ಲಿರುವಾಗಲೇ ವೈದ್ಯೆಯಾಗುವ ಕನಸು ಕಟ್ಟಿಕೊಂಡಿದ್ದೆ. ಆದರೆ ಈಗ ಮಂತ್ರಿಯಾಗಿ ಇಂತಹ ದೊಡ್ಡ ಯೋಜನೆ ನಿರ್ವಹಿಸುವ, ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನದಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದರು.
ಮಹಿಳೆಯರು ಈ ಮೊದಲು ಸಣ್ಣ ಪುಟ್ಟದ್ದಕ್ಕೂ ಮಾವನ ಮುಂದೆ, ಗಂಡನ ಮುಂದೆ ಕೈ ಚಾಚುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಮಹಿಳೆಯರಿಗೆ ಯಜಮಾನಿ ಎಂದು ಕರೆದರು. ಪಂಚ ಗ್ಯಾರಂಟಿ ಮೂಲಕ ಶಕ್ತಿ ತುಂಬಿದರು. ಇಂತಹ ಪುಣ್ಯದ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿತು. ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ನಾನು ಪೂಜಿಸುತ್ತೇನೆ. ಯಾರದ್ದೋ ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಪ್ರಶಂಸಿದರು.