ಬೆಳಗಾವಿ: ಬಿಜೆಪಿ - ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಸ್ವಾಗತಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲೆಕ್ಷನ್ ಯಾವ ರೀತಿ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಜನರ ಆಶೋತ್ತರಗಳೇನು ಎಂಬ ಬಗ್ಗೆಯೂ ಗೊತ್ತು. ಅವುಗಳನ್ನೆಲ್ಲ ಈಡೇರಿಸುತ್ತಿದ್ದು, ಒಳ್ಳೆಯ ರೀತಿಯಿಂದ ಸರ್ಕಾರ ನಡೆಸುತ್ತಿದ್ದೇವೆ. ಹಾಗಾಗಿ ಅವರು ಮೈತ್ರಿ ಮಾಡಿಕೊಂಡರೆ ನಾವು ಸ್ವಾಗತಿಸುತ್ತೇವೆ ಎಂದರು.
ಬಿಜೆಪಿ-ಜೆಡಿಎಸ್‌ನವರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿರುವ ಭಯದಿಂದ ಮೈತ್ರಿ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರ‍್ಯಾರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಮತ್ತು ಯಾರಿಗೆ ಭಯ ಇದೆ ಅಂತಾನೂ ನನಗೆ ಗೊತ್ತಿಲ್ಲ ಎಂದರು. ಬೆಳಗಾವಿ ಲೋಕಸಭೆಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತೆ ಕಂತೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು. ಹೈಕಮಾಂಡ್ ಮತ್ತು ಬೆಳಗಾವಿ ಜಿಲ್ಲೆಯ ನಾಯಕರಿದ್ದಾರೆ. ಕುಳಿತುಕೊಂಡು ಚರ್ಚೆ ಮಾಡಿ ಬಳಿಕ ಯಾರು ಅಭ್ಯರ್ಥಿ ಆಗಬೇಕೆಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಪಶು ಸಖಿಯರು ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡಿ - ಸಚಿವೆ:ಮತ್ತೊಂದೆಡೆ, ಪಶು ಸಖಿ ಎನ್ನುವುದು ರಾಜ್ಯ ಸರ್ಕಾರದ ವಿನೂತನ ಮತ್ತು ಅತ್ಯಂತ ಉಪಯುಕ್ತ ಯೋಜನೆಗಳಲ್ಲಿ ಒಂದಾಗಿದ್ದು, ಪ್ರತಿ ಮನೆ ಮನೆಗೆ ತೆರಳಿ ಜಾನುವಾರುಗಳನ್ನು ಸಾಕಿದವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ, ಅಗತ್ಯವಾದ ಮಾಹಿತಿಗಳನ್ನು ಒದಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.