ಬೆಳಗಾವಿ:''ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಅರ್ಬನ್ ಸೊಸೈಟಿಗಳಲ್ಲಿ ಹಣ ಕಬಳಿಸಿ, ದುರುಪಯೋಗಪಡಿಸಿಕೊಂಡು ಸಂಸ್ಥೆಗಳಿಗೆ ವಂಚನೆ ಎಸಗುವವರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು'' ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್ ರಾಜಣ್ಣ ಸೂಚನೆ ನೀಡಿದರು.
ಸುವರ್ಣ ವಿಧಾನ ಸೌಧದ ಕಾನ್ಫರೆನ್ಸ್ ಹಾಲ್ನಲ್ಲಿ ಇಂದು ನಡೆದ ಬೆಳಗಾವಿ ಪ್ರಾಂತ್ಯದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ''ಜಿಲ್ಲೆಗಳ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಕಳೆದ 3ರಿಂದ 4 ವರ್ಷಗಳಿಂದ ಬಾಕಿಯಿರುವ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ನ್ಯಾಯಾಲಯ ಹಂತಗಳಲ್ಲಿರುವ ಪ್ರಕರಣಗಳ ಕೋರ್ಟ್ ನಿಗದಿ ದಿನಾಂಕಕ್ಕೆ ಅಧಿಕಾರಿಗಳು ತಪ್ಪದೇ ಹಾಜರಿರಬೇಕು'' ಎಂದು ಸೂಚಿಸಿದರು. ''ಪ್ರತಿ ಸಭೆಯಲ್ಲಿ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಈ ಹಿಂದಿನ ಮಾಹಿತಿಯನ್ನು ಪರಿಶೀಲಿಸಿದಾಗ ಸಾಕಷ್ಟು ಮಾಹಿತಿಗಳು ಹೊಂದಾಣಿಕೆ ತಪ್ಪುತ್ತಿವೆ. ಅಧಿಕಾರಿಗಳು ಸಮರ್ಪಕ ಮಾಹಿತಿ ಜೊತೆಗೆ ಸಭೆಗಳಿಗೆ ಹಾಜರಾಗಬೇಕು'' ಎಂದು ಸಚಿವರು ತಿಳಿಸಿದರು.
ಪಿಗ್ಮಿ ಕಲೆಕ್ಷನ್ ಸಾಫ್ಟ್ ವೇರ್ ದುರ್ಬಳಕೆ:''ಠೇವಣಿ ಏಜೆಂಟ್ಗಳಿಂದ ಪಿಗ್ಮಿ ಕಲೆಕ್ಷನ್ಗಳಲ್ಲಿ ಈಗಾಗಲೇ ಅನೇಕ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾಫ್ಟ್‌ವೇರ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಣ ದುರ್ಬಳಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು'' ಎಂದು ಕೆ.ಎನ್.ರಾಜಣ್ಣ ತಿಳಿಸಿದರು.