ಬೆಳಗಾವಿ/ ಬೆಂಗಳೂರು :ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಪೀಕರ್ ಸ್ಥಾನದ ಕುರಿತು ಹೇಳಿರುವ ವಿವಾದಾತ್ಮಕ ಹೇಳಿಕೆ ವಿಧಾನಸಭೆಯಲ್ಲಿ ಇಂದು ಕೋಲಾಹಲಕ್ಕೆ ಕಾರಣವಾಯಿತು. ಸದನ ಇಂದು ಬೆಳಗ್ಗೆ ಸಮಾವೇಶಗೊಂಡಾಗ ಸ್ಪೀಕರ್ ಯು ಟಿ ಖಾದರ್ ಅವರು ಪ್ರಶ್ನೋತ್ತರ ಆರಂಭಿಸಿದರು. ಆಗ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾದಾಗ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಜಮೀರ್ ಅಹಮ್ಮದ್ ಖಾನ್ ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಅವರು ರಾಜ್ಯದ ಜನರ ಭಾವನೆ ಕೆದಕಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ಕೊಡಲ್ಲ. ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ವಜಾ ಮಾಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಈ ವೇಳೆ, ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ನಾವೇನು ಗುಲಾಮರಾ? ಎಂದು ವಾಗ್ದಾಳಿ ನಡೆಸಿದರು. ಅಶೋಕ್ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರು ವಾಗ್ದಾಳಿ ನಡೆಸಿದರು. ಸ್ಪೀಕರ್ ಸ್ಥಾನಕ್ಕೆ ಜಮೀರ್ ಅಗೌರವ ತಂದಿದ್ದಾರೆ ಎಂದು ಡಾ. ಸಿ. ಎನ್. ಅಶ್ವತ್ಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು. ಬಿಜೆಪಿ ಸದಸ್ಯರ ನಡೆಗೆ ಸಚಿವ ಕೃಷ್ಣ ಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿ, ನೋಟಿಸ್ ಕೊಟ್ಟು ಮಾತನಾಡಲಿ, ಪ್ರಶ್ನೋತ್ತರ ಅವಧಿಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.