ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿ ಭಾಷಿಕರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಬೆಳಗಾವಿ ಎಂದೆಂದಿಗೂ ನಮ್ಮದೇ ಎಂದು ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ಬೆಳಗಾವಿ ಎಂದೆಂದಿಗೂ ನಮ್ಮದು. ಮುಗಿದು ಹೋಗಿರುವ ಗಡಿ ವಿವಾದ ಕೆದಕುವ ಪ್ರಯತ್ನ ನಡೆದಿದೆ ಎಂದರು.
ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ಪ್ರಚೋದನಕಾರಿ ಕೆಲಸಕ್ಕೆ ಯಾರೂ ಪ್ರೋತ್ಸಾಹ ಕೊಡಬಾರದು. ಎಲ್ಲರೂ ಒಂದಾಗಿ ಬೆಳಗಾವಿ ಅಭಿವೃದ್ಧಿಗೆ ಕೈ ಜೋಡಿಸೋಣ. ಬೆಳಗಾವಿ ಕರ್ನಾಟಕದ್ದು ಅಂತ ಸಾರಿ ಸಾರಿ ಹೇಳಿದ್ದೇವೆ. ಬೆಳಗಾವಿಯ ನಾಗರಿಕರಿಗೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಗೌರವ ಕೊಡುತ್ತದೆ. ಗಡಿ ವಿಚಾರದಲ್ಲಿ ಎಲ್ಲಾ ರೀತಿಯ ಹೋರಾಟಕ್ಕೆ ಕರ್ನಾಟಕ ಸರ್ಕಾರ ಸಿದ್ಧವಿದ್ದು, ಎಲ್ಲರೂ ಸಹಬಾಳ್ವೆಯಿಂದ ಬದುಕೋಣ ಎಂದರು.
ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಐತಿಹಾಸಿಕ. ಇದು ಯಾರ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ, ಇದು ಪೌರತ್ವ ಕಾಪಾಡುವ ಕಾಯ್ದೆಯಾಗಿದೆ ಎಂದರು. ಈ ಕುರಿತು ಜನರಲ್ಲಿರುವ ಗೊಂದಲ ನಿವಾರಿಸಬೇಕಿದೆ ಎಂದ ಅವರು, ರಾಜ್ಯ ಸರ್ಕಾರದ ಸಾಧನೆಗಳನ್ನು ತಮ್ಮ ಭಾಷಣದಲ್ಲಿ ಕೊಂಡಾಡಿದರು.