ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ನೀರಾವರಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಲಮಟ್ಟಿ ಹಾಗೂ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆಯಾಗುವ ಅಥಣಿ ತಾಲೂಕಿನ ಜನವಾಡ, ಮಹಿಷವಾಡಗಿ, ನಂದೇಶ್ವರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮನೆಗಳ ಸಂಖ್ಯೆಯ ಆಧಾರದ ಮೇಲೆ ಪಂಚಾಯಿತಿ ಆಸ್ತಿ ರಿಜಿಸ್ಟರ್ ಮತ್ತು ಮುಳುಗಡೆ ಸಮೀಕ್ಷೆ ಆಧರಿಸಿ ಹದಿನೈದು ದಿನಗಳಲ್ಲಿ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದ ಸಚಿವರು ಸೂಚನೆ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಬಳಿಕ ಸಭೆ ನಡೆಸಿದ ಸಚಿವ ಕಾರಜೋಳ ಪ್ರದೇಶಗಳ ಪರಿಶೀಲನೆ ಬಳಿಕ ವಿವಿಧಶ ಇಲಾಖಾ ಅಧಿಕಾರಿಗಳೊಂದಿಗೆ ಮುಂಗಾರು ಹಂಗಾಮಿನಲ್ಲಿ ಪ್ರವಾಹ ಅತಿವೃಷ್ಟಿಯಿಂದ ಬಾಧಿತಗೊಂಡ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಭೆ ನಡೆಸಿದರು.
ಕೂಡಲೇ ಹಕ್ಕುಗಳನ್ನು ವಿತರಿಸಿ:
ಹಕ್ಕುಪತ್ರಗಳನ್ನು ನೀಡುವುದರ ಜೊತೆಗೆ ಪುನರ್ವಸತಿ ಕೇಂದ್ರಗಳಲ್ಲಿ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಪದೇ ಪದೆ ಪ್ರವಾಹ ಪರಿಸ್ಥಿತಿ ಎದುರಾಗುವುದರಿಂದ ಕೂಡಲೇ ಹಕ್ಕುಗಳನ್ನು ವಿತರಿಸಿ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಜಲಾಶಯದ ಎತ್ತರ 524 ಮೀಟರ್ ಗಮನದಲ್ಲಿಟ್ಟುಕೊಂಡು ಪುನರ್ವಸತಿ ಕೇಂದ್ರಗಳನ್ನು ಗುರುತಿಸಬೇಕು ಎಂದು ತಿಳಿಸಿದರು.
ಕಾಮಗಾರಿ ಆರಂಭಕ್ಕೆ ಸೂಚನೆ:
ಪ್ರವಾಹ ಅಥವಾ ಅತಿವೃಷ್ಟಿ ಸಂದರ್ಭದಲ್ಲಿ ಟಿಸಿ ದುರಸ್ತಿ, ವಿದ್ಯುತ್ ಪರಿವರ್ತಕಗಳನ್ನು ಒದಗಿಸುವಾಗ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಒಂದು ವೇಳೆ, ಈ ರೀತಿಯ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ಹಾನಿಗೊಳಗಾದ ಸೇತುವೆ ಮತ್ತಿತರ ಮೂಲಸೌಕರ್ಯ ದುರಸ್ತಿಗೆ ಸರ್ಕಾರ 120 ಕೋಟಿ ರೂ.ಬಿಡುಗಡೆ ಮಾಡಿದೆ. ಕೂಡಲೇ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಬೆಳೆಹಾನಿ ಸಮೀಕ್ಷೆ ಲೋಪ, ಅಮಾನತಿಗೆ ಸೂಚನೆ:
ಪ್ರವಾಹ ಕಡಿಮೆಯಾದ ಬಳಿಕ ಜಮೀನುಗಳಿಗೆ ತೆರಳಿ ಬೆಳೆ ಹಾನಿ ಸಮರ್ಪಕವಾಗಿ ಸಮೀಕ್ಷೆ ಕೈಗೊಳ್ಳಬೇಕು. ಬೆಳಹಾನಿಗೊಳಗಾದ ಯಾವುದೇ ಜಮೀನು ಸಮೀಕ್ಷೆಯಿಂದ ಹೊರಗುಳಿಯಬಾರದು. ಬೆಳೆ ಕಳೆದುಕೊಂಡ ಎಲ್ಲ ರೈತರಿಗೂ ಪರಿಹಾರ ದೊರಕುವಂತಾಗಬಾರದು. ಸಮೀಕ್ಷೆಯಲ್ಲಿ ಲೋಪದೋಷ ಮಾಡಿದರೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಅಮಾನತುಗೊಳಿಸಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದರು.
ಮನೆಹಾನಿ ಸಮೀಕ್ಷೆ ಮಾಡುವಾಗ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಕಡ್ಡಾಯವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಬೇಕು. ಅನರ್ಹರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತಹ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸಮೀಕ್ಷೆ ಕೈಗೊಳ್ಳುವ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು ಎಂದು ತಿಳಿಸಿದರು.
ಓದಿ; ಭುಗಿಲೆದ್ದ ಅಸಮಾಧಾನ.. ಸಚಿವ ಆನಂದ್ ಸಿಂಗ್ ಮುನಿಸು, ರಾಮುಲುರಿಂದಲೂ ಅತೃಪ್ತಿ ಮಾತು?
ಕಲ್ಲೋಳ ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿಗೆ ಕ್ರಮ:
ಕಲ್ಲೋಳ ಬ್ಯಾರೇಜ್ ನಿರ್ಮಾಣದ 35 ಕೋಟಿ ರೂಪಾಯಿ ವೆಚ್ವದ ಯೋಜನೆಗೆ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು. ಕೆರೆಗಳನ್ನು ನಿರ್ವಹಿಸುವುದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಣಕಾಸು ವ್ಯವಸ್ಥೆ ಮಾಡಿಕೊಂಡು ನಿರ್ವಹಣೆ ಕೈಗೊಳ್ಳಬೇಕು ಎಂದರು.
ಚಿಕ್ಕೋಡಿ ಉಪ ವಿಭಾಗದ ಐದು ತಾಲೂಕುಗಳಲ್ಲಿ 19 ಲಕ್ಷ ಗುರಿಯ ಪೈಕಿ 8.26 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಶೇ.42.83 ಗುರಿ ಸಾಧಿಸಲಾಗಿದೆ. ಮೊದಲ ಡೋಸ್ ಪಡೆದುಕೊಂಡು ಹನ್ನೆರಡು ವಾರ ಪೂರ್ಣಗೊಳಿಸಿದವರಿಗೆ ಎರಡನೇ ಡೋಸ್ ಲಸಿಕೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಆಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.