ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಸರ್ವ ಪಕ್ಷಗಳ ಸಹಕಾರ ಅಗತ್ಯ ಎಂದು ಸಚಿವ ಗೋವಿಂದ ಕಾರಜೋಳ ಅಭಿಪ್ರಾಯ ಪಟ್ಟಿದ್ದಾರೆ. ವಿಧಾನ ಪರಿಷತ್ನಲ್ಲಿ ಉತ್ತರ ಕರ್ನಾಟಕ ಭಾಗದ ಸುದೀರ್ಘ ಚರ್ಚೆಗೆ ಉತ್ತರ ನೀಡಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಜಮೀನಿದೆ, ನೀರಿದೆ. ಸದ್ಬಳಕೆ ಆಗಿಲ್ಲ. ಬ್ರಿಟಿಷ್ ಕಾಲದಿಂದಲೂ ಈ ಭಾಗದ ಅಭಿವೃದ್ಧಿಗೆ ಹೋರಾಟ ನಡೆದಿದೆ. ಆದರೆ, ಇನ್ನೂ ಅಂತಹ ಅಭಿವೃದ್ಧಿ ಆಗಿಲ್ಲ. ಸಾಕಷ್ಟು ಮಹನೀಯರು ಹೋರಾಡಿ ಜೈಲು ವಾಸ ಅನುಭವಿಸಿದ್ದರು.
ಸ್ವಾತಂತ್ರ್ಯ ಬಂದ ನಂತರ ರಾಜ್ಯ ಅಭಿವೃದ್ಧಿ ಆಗಲಿದೆ ಎಂಬ ನಿರೀಕ್ಷೆ ಹೊಂದಿತ್ತು. ಅಂದು ಕೊಯ್ನಾ ಅಣೆಕಟ್ಟೆಗೆ ನಾವು ಹಣ ನೀಡಿದ್ದರೆ ಇಂದು ಆದಷ್ಟು ಮುಳುಗಡೆ ಆಗುತ್ತಿರಲಿಲ್ಲ. ಅಂದು ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೆ ಮನಸ್ಸು ಮಾಡಿದ್ದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗಿರುತ್ತಿತ್ತು. ನಾವೇ ಯೋಜನೆ ಮಾಡಬೇಕೆಂದು ಒಂದು ಯೋಜನೆ ಜಾರಿಗೆ ತರಲು ಮುಂದಾದೆವು. ಇಂದಿಗೂ ಅಖಂಡ ಉತ್ತರ ಕರ್ನಾಟಕ ಭಾಗದ ಜನರ ಬೇಡಿಕೆ ಒಂದೇ ಆಗಿದೆ, ಅದು ನೀರಾವರಿ ಯೋಜನೆ. ಜನ ಗುಳೆ ಹೋಗುವುದನ್ನು ತಪ್ಪಿಸಲು ನೀರಾವರಿ ಯೋಜನೆ ಅಗತ್ಯವಾಗಿತ್ತು ಎಂದರು.
ಎಸ್ಆರ್ಪಿ ಬಗ್ಗೆ ಅಭಿಮಾನ
ಐದನೇ ತಾರೀಖಿಗೆ ನನ್ನ ಅವಧಿ ಮುಗಿಯುತ್ತಿದೆ ಅಂದಾಗ ಕಸಿವಿಸಿ ಆಯಿತು. ಅವರು ಇಲ್ಲಿ ಇರಬೇಕಿತ್ತು. ಭಾವನಾತ್ಮಕ ಸಂಬಂಧ ರಕ್ತ ಸಂಬಂಧಕ್ಕಿಂತ ದೊಡ್ಡದು. ನಮ್ಮ ನಡುವೆ ಈ ಬಾಂಧವ್ಯ ಇದೆ. ಎಸ್.ಆರ್.ಪಾಟೀಲ್ ಮೇಲೆ ಅಭಿಮಾನ, ಪ್ರೀತಿ, ಗೌರವ ಇದೆ ಎಂದರು.
17,207 ಕೋಟಿ ರೂ. ಮೊತ್ತದ ನೀರಾವರಿ ಯೋಜನೆ ಮೊತ್ತ ಇಂದು ಹೆಚ್ಚಾಗಿದೆ. ಅಧಿಕಾರಕ್ಕೆ ಬಂದ ಮೇಲೆ 7 ಕೋಟಿ ರೂ. ಮಾತ್ರ ವೆಚ್ಚ ಮಾಡಿಗೆ. ಕಾಂಗ್ರೆಸ್ ನ 5 ವರ್ಷ ಹಾಗೂ ಜೆಡಿಎಸ್ನ ಒಂದು ವರ್ಷ ಅಧಿಕಾರದ ಅವಧಿಯಲ್ಲಿ ಮಾಡಿದ ವೆಚ್ಚ ಇದಾಗಿದೆ. ಭೂಮಿ ವಶಪಡಿಸಿಕೊಳ್ಳುವ ವಿಚಾರದಲ್ಲೂ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದರು.
ಆಗ ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. 4050 ಕೋಟಿ ರೂ. ಮೊತ್ತವನ್ನು ನಾವು ಯೋಜನೆಗೆ ನೀಡಿದ್ದೇವೆ. ಆರು ವರ್ಷದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ 26 ಸಾವಿರ ಎಕರೆ ಭೂಮಿ ವಶಪಡಿಸಿಕೊಂಡಿದ್ದರು. ನಾವು 5,866 ಎಕರೆ ಭೂಮಿ ವಶಪಡಿಸಿಕೊಂಡಿದ್ದೇವೆ. ಇತ್ತೀಚೆಗೆ ಸಿಎಂ ಹೆಚ್ಚುವರಿಯಾಗಿ 2.5 ಸಾವಿರ ಕೋಟಿ ರೂ. ನೀಡಿದೆ.
ಸಿದ್ದರಾಮಯ್ಯ ಸರ್ಕಾರ 51 ಸಾವಿರ ಕೋಟಿ ರೂ. ಮೊತ್ತಕ್ಕೆ ಯೋಜನೆ ವೆಚ್ಚ ನವೀಕರಿಸಿದರು. ಕೃಷ್ಣಾ ನ್ಯಾಯಾಧಿಕರಣವಾಗಿ 8 ವರ್ಷ ಆಗಿದೆ. ನಿರೀಕ್ಷಿತ ಪ್ರಗತಿ ಆಗಿಲ್ಲ. ನಮ್ಮ ಸರ್ಕಾರದ ಮೊದಲ ಆದ್ಯತೆ ಸಂಪೂರ್ಣ ಮುಳುಗಡೆ ಆದವರಿಗೆ ಪರಿಹಾರ ಕಲ್ಪಿಸುವುದಾಗಿದೆ. ಭೂಮಿ, ಮನೆ ಕಳೆದುಕೊಂಡವರಿಗೆ ಪ್ರಥಮ ಆದ್ಯತೆ ಮೇಲೆ ಪರಿಹಾರ ಕಲ್ಪಿಸುತ್ತೇವೆ ಎಂದರು.
ಮಹದಾಯಿ ಪ್ರಸ್ತಾಪ
ಮಹದಾಯಿ ನದಿ ಯೋಜನೆ ಡಿಪಿಆರ್ ಆಗಿದೆ. ಈ ವಿಚಾರ ಕೋರ್ಟ್ ನಲ್ಲಿದೆ. ಹಾಗಾಗಿ ಸೂಕ್ಷ್ಮವಾಗಿ ಮಾತನಾಡುತ್ತೇನೆ. ನಾವು 36 ಟಿಎಂಸಿ ನೀರು ಕೇಳಿದ್ದೆವು. ನಮಗೆ 13.5 ಟಿಎಂಸಿ ನೀರು ಸಿಕ್ಕಿದೆ. ಇಷ್ಟರಲ್ಲೇ ವಿವಾದ ಇತ್ಯರ್ಥವಾಗುತ್ತೆ ಎಂದರು.
ಮೇಕೆದಾಟು ಯೋಜನೆ ಬಗೆಗೂ 2007 ರಿಂದ ಕಾರ್ಯ ಪ್ರಗತಿಯಲ್ಲಿದೆ. ಡಿಪಿಆರ್ ತಯಾರಿಸಲು 2014 ರಲ್ಲಿ ನಿರ್ಧರಿಸಲಾಗಿತ್ತು. 284. 75 ಟಿಎಂಸಿ ನೀರು ಕಾವೇರಿ ಜಲಾನಯನ ಪ್ರದೇಶದಲ್ಲಿ ನಮಗೆ ನೀಡಿಕೆಯಾಗಿದೆ. ಸರಿ ಸುಮಾರು ಅಷ್ಟೇ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಟ್ಟು ಕೊಡಬೇಕಿದೆ. ನಾವು ನಮ್ಮ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ. ಭದ್ರಾ ಮೇಲ್ದಂಡೆ ಯೋಜನೆಯ ಶೇ.99 ರಷ್ಟು ಕಾಮಗಾರಿ ಮುಗಿದಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ಕಲ್ಪಿಸಿದ್ದೇವೆ. 326 ಕೋಟಿ ರೂ. ಪರಿಹಾರ ನೀಡಿದ್ದೇವೆ. ರಸ್ತೆ ಹಾಳಾಗಿದ್ದರ ರಿಪೇರಿ ಮಾಡಲು ಇಲಾಖೆಗೆ ಸೂಚನೆ ನೀಡಿ, ಅನುದಾನ ನೀಡಿದ್ದೇವೆ. 371 ಜೆ ಅಡಿ ಸಾಕಷ್ಟು ನೇಮಕ ಆಗಿದೆ. 20,215 ಹುದ್ದೆ ನೇಮಕ ಆಗಬೇಕಿದೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಿತ್ತೂರು ಕರ್ನಾಟಕ ಭಾಗದಲ್ಲಿ 15,800 ಮನೆ ಸಂಪೂರ್ಣ ಹಾನಿಯಾಗಿತ್ತು. ಪರಿಹಾರ ಕಲ್ಪಿಸಿದ್ದೇವೆ. ಬೆಳೆಹಾನಿ ಪರಿಹಾರ ಸಹ ಸಲ್ಲಿಕೆ ಮಾಡಿದ್ದೇವೆ. ವಸ್ತು ಹಾನಿಗೂ ಪ್ರತಿ ಮನೆಗೆ 10 ಸಾವಿರ ರೂ. ಪರಿಹಾರ ಕಲ್ಪಿಸಿದ್ದೇವೆ. ಪ್ರಾಣಹಾನಿ, ಪ್ರಾಣಿಗಳು ಸಾವನ್ನಪ್ಪಿದ್ದಕ್ಕೂ ಪರಿಹಾರ ಒದಗಿಸಿದ್ದೇವೆ. 576 ಕೋಟಿ ಇದುವರೆಗೂ ಪರಿಹಾರ ನೀಡಿದ್ದು, ಮುಂದಿನ ದಿನಗಳಲ್ಲಿ ಇತರ ಪರಿಹಾರ ಕಲ್ಪಿಸುತ್ತೇವೆ. ಶಿಕ್ಷಕ, ಸಿಬ್ಬಂದಿ ಹುದ್ದೆ ಸಹ ಭರ್ತಿ ಮಾಡುತ್ತೇವೆ ಎಂದು ವಿವರಿಸಿದರು.
ಉತ್ತರ ಕರ್ನಾಟಕ ಸಮಸ್ಯೆ ಕುರಿತು ಬಿಸಿಬಿಸಿ ಚರ್ಚೆ
ವಿವಿಧ ಚರ್ಚೆಗಳ ಮೇಲೆ ಸರ್ಕಾರದಿಂದ ಉತ್ತರ ಸಿಗದೇ ಬೇಸರಗೊಂಡು ಬಾವಿಗಿಳಿದು ಧರಣಿ ಆರಂಭಿಸಿದ್ದ ವಿಧಾನ ಪರಿಷತ್ ಪ್ರತಿಪಕ್ಷ ಸದಸ್ಯರು ಸಭಾಪತಿ ಬಸವರಾಜ್ ಹೊರಟ್ಟಿ ಮನವೊಲಿಕೆ ಹಿನ್ನೆಲೆ ಹೋರಾಟ ವಾಪಸ್ ಪಡೆದರು.
ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡ್ತಿದ್ದೇವೆ. ನಾವಿನ್ನೂ 40 ಪರ್ಸೆಂಟ್ ಕಮೀಷನ್ ವಿಚಾರದಲ್ಲಿ ಚರ್ಚೆ ಮಾಡಬೇಕಿದೆ. ಅಷ್ಟರಲ್ಲೇ ನೀವು ಉತ್ತರ ಕೊಡಲು ಆರಂಭಿಸಿದರೆ ಹೇಗೆ ? ನಮಗೆ ಚರ್ಚೆ ಮಾಡಲು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಸದಸ್ಯರಿಗೆ ಜೆಡಿಎಸ್ ಸದಸ್ಯರು ಸಾಥ್ ಕೊಟ್ಟರು.
ಸಚಿವ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ್ ಉತ್ತರ ನೀಡುವುದಾಗಿ ಹೇಳುತ್ತಿದ್ದಂತೆ ಉಂಟಾದ ಆಕ್ರೋಶ, ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಎಲ್ಲರನ್ನೂ ಸಮಾಧಾನಗೊಳಿಸಿ ಪ್ರತಿಪಕ್ಷ ಧರಣಿ ವಾಪಸ್ ಪಡೆಯುವಂತೆ ಮಾಡಿದರು. ಕಲಾಪದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಆರಂಭವಾಯಿತು.
ಹಾಸ್ಯ ಪ್ರಸಂಗ
ಸಿ.ಎಂ ಇಬ್ರಾಹಿಂ ಮಾತನಾಡಿ, ನಮ್ಮ ಚರ್ಚೆಗೆ ಲಿಖಿತ ಮೂಲಕ ಉತ್ತರ ನೀಡಬೇಕು. ನೀವು ಹೀಗೆ ಬೆದರಿಕೆ ಹಾಕಿದ್ರೆ ಹೇಗೆ ಕೆಲಸ ಮಾಡೊದು? ಈ ಯಪ್ಪಾ ಇಷ್ಟು ಕುಳ್ಳ ಇದ್ದಾರೆ. ನನ್ನ ಮೇಲೆ ಎಗರಿ ಬೀಳುತ್ತಾರೆ. ನಾನು ಇಷ್ಟುದ್ದ ಇದ್ದೇನೆ ಎನ್ ಮಾಡೊದು ಎಂದು ಕಾರಜೋಳ ಕಾಲೆಳೆದರು. ನಗುತ್ತಲೇ ಉತ್ತರ ನೀಡಿದ ಗೋವಿಂದ ಕಾರಜೋಳ, ನಾನು ಇಬ್ರಾಹಿಂ ಅವರ ಮೇಲೆ ಬೀಳಲು ಹೋಗಿದ್ನಂತೆ ಇದು ಸಾಧ್ಯನಾ? ಎಂದು ನಗಾಡಿದರು. ನಿಮ್ಮಿಬ್ಬರ ಬಗ್ಗೆ ಗೊತ್ತೈತಿ ಬಿಡಿ ಕುಂಡ್ರಿ ಎಂದ ಸಭಾಪತಿ ಮಾತಿಗೆ ಇದು ನಮ್ಮ ಹಳೆ ಕಂಪನಿ ಐತಿ ಎಂದು ನಗಾಡಿದ ಇಬ್ರಾಹಿಂ ಸದನವನ್ನೂ ನಗೆಗಡಲಲ್ಲಿ ತೇಲಿಸಿದರು.
ವೆಂಕಟೇಶ್ ಮಾತಿಗೆ ತಡೆ
ಉತ್ತರ ಕರ್ನಾಟಕ ಭಾಗದ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸದಸ್ಯ ಮೂವಿ ವೆಂಕಟೇಶ ಆಡಳಿತಪಕ್ಷದ ಸದಸ್ಯರು ಆಗಾಗ ತಡೆಯೊಡ್ಡಿದರು. ಆರಂಭದಲ್ಲಿ ಇವರು ಮಾತಿಗಿಳಿದ ಸಂದರ್ಭ ಬಿಜೆಪಿ ಸದಸ್ಯ ಸಾಯಿಬಣ್ಣ ತಳವಾರ್ ಮಧ್ಯಪ್ರವೇಶಿಸಿ ಒಂದು ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದರು. ಇದಕ್ಕೆ ಸಿಟ್ಟಾದ ವೆಂಕಟೇಶ್ ನಾನು ಬೆಂಗಳೂರಿನವನಾಗಿದ್ದು ಉತ್ತರ ಕರ್ನಾಟಕ ಭಾಗದ ಸಮಸ್ಯೆಯನ್ನು ಸದನದ ಗಮನ ಸೆಳೆಯುತ್ತಿದ್ದೇನೆ.
ಆಡಳಿತ ಪಕ್ಷದ ಹಾಗೂ ಆ ಭಾಗದ ಸದಸ್ಯರಾಗಿ ನೀವು ಸಮಸ್ಯೆಯ ಪ್ರಸ್ತಾಪ ಮಾಡಬೇಕಿತ್ತು. ನಿಮ್ಮ ಪರವಾಗಿ ನಾನು ಮಾತನಾಡುತ್ತಿರುವಾಗ ಕನಿಷ್ಠ ಬೆಂಬಲಿಸುವ ಬದಲು ವಿರೋಧಿಸುತ್ತಿರುವುದು ವಿಪರ್ಯಾಸ ಎಂದರು.
ಈ ಸಂದರ್ಭ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ಕೊಂಚ ಮಾತಿನ ಚಕಮಕಿ ನಡೆಯಿತು. ಸಭಾಪತಿ ಬಸವರಾಜ್ ಹೊರಟ್ಟಿ ಮಧ್ಯಪ್ರವೇಶಿಸಿ ಸಾಯಿಬಣ್ಣ ನೀವು ಸುಮ್ಮನೆ ಕೂತ್ಕೊಳ್ಳಿ. ವೆಂಕಟೇಶ್ ಅವರೇ ನೀವು ಮಾತು ಮುಂದುವರಿಸಿ ಅಂತ ಸಲಹೆ ನೀಡಿದರು. ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಸಾಯಿಬಣ್ಣ ಅವರ ಪೂರ್ತಿ ಹೆಸರನ್ನು ನೀವು ಹೇಳಬೇಕು. ಇಲ್ಲವಾದರೆ ಆಚೆ ಕುಳಿತ ನಮ್ಮವರಿಗೆ ಗೊಂದಲ ಆಗುತ್ತದೆ. ಸಾಬಣ್ಣ ಅಂತ ಅರ್ಥ ಮಾಡಿಕೊಂಡರೆ ಕಷ್ಟ ಅಂದರು.
ಮಾತು ಮುಂದುವರಿಸಿದ ಯುಬಿ ವೆಂಕಟೇಶ್ 371 ಜೆ ಬರದಿದ್ದರೆ ಈ ಭಾಗದ ಅಭಿವೃದ್ಧಿ ಆಗುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆದರೆ ಹಿಂದಿನ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಒಂದು ಉತ್ತಮ ಕಾರ್ಯವನ್ನು ವಿಫಲಗೊಳಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಡೆಯದಾಗಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು 371 ಜೆ ತಂದರು ಸಹ ಕಲಬುರ್ಗಿ ಯಾಕೆ ಅಭಿವೃದ್ಧಿ ಆಗಿಲ್ಲ ಎಂದು ಪ್ರಶ್ನಿಸಿದರು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಮದುವೆ ಮತ್ತೊಮ್ಮೆ ಬಿರುಸಿನ ಮಾತು ಆರಂಭವಾಯಿತು. ಇದನ್ನು ತಡೆದ ಸಭಾಪತಿಗಳು ಬಿಜೆಪಿ ಸದಸ್ಯ ಶಶೀಲ್ ನಮೋಶಿ ಗೆ ಮಾತನಾಡಲು ಸೂಚಿಸಿದರು.
ಶಶಿಲ್ ನಮೋಶಿ ಮಾತನಾಡಿ, ಈ ಭಾಗದ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು. 24 ರಿಂದ 30 ಸಾವಿರ ಹುದ್ದೆ ತುಂಬಬೇಕು. ಹಿಂದಿನ ಸರ್ಕಾರ ಮಾಡದ ನೇಮಕವನ್ನೂ ಈಗ ಭರ್ತಿ ಮಾಡಿ. 371ಜೆ ಜಾರಿಗೆ ಬಂದಿದ್ದೇ ನಮ್ಮ ಭಾಗದ ಕಲ್ಯಾಣಕ್ಕೆ. ಹೀಗಾಗಿ ಒಂದು ಕಚೇರಿ ಇದೇ ಭಾಗದಲ್ಲಿ ತೆರೆಯಬೇಕು. ಸ್ಥಳೀಯರ ನೇಮಕಕ್ಕೆ ಪರಿಗಣಿಸಬೇಕು.
ಬ್ಯಾಕ್ ಲಾಗ್ ಹುದ್ದೆ ನಮ್ಮವರಿಗೆ ಮೀಸಲಿಡಿ. ಸ್ಥಳೀಯ ಸಮಸ್ಯೆ ಚರ್ಚೆಗೆ ಎರಡು ವರ್ಷದಿಂದ ಸಭೆ ನಡೆದಿಲ್ಲ. ಇಎಸ್ಐ ಆಸ್ಪತ್ರೆ ಬಂದಿದೆ. ಕೋವಿಡ್ ಸಂದರ್ಭ ಉತ್ತಮ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಸಹ ಒಂದಿಷ್ಟು ಕೊರತೆ ಇದೆ ನಿವಾರಿಸಬೇಕು. ಸೆಂಟ್ರಲ್ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಇಲ್ಲಿ ನೀರಿನ ಅನುಕೂಲತೆ ಇಲ್ಲ. ಅದಕ್ಕೆ ಯೋಜನೆ ರೂಪಿಸಬೇಕು ಎಂದು ಸಲಹೆ ಇತ್ತರು.
ಓದಿ:ನಾಮಕರಣ ನೆಪದಲ್ಲಿ ಮತಾಂತರಕ್ಕೆ ಯತ್ನ ಆರೋಪ!