ಬೆಳಗಾವಿ:ಕರ್ನಾಟಕದ ಒಂದಿಂಚು ಭೂಮಿ, ಒಂದು ಹನಿ ನೀರನ್ನು ಬಿಟ್ಟುಕೊಡಲ್ಲ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಹಾರಾಷ್ಟ್ರ ನಾಯಕರಿಗೆ ತಿರುಗೇಟು ನೀಡಿದರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಎಂಇಎಸ್ 2005ರಲ್ಲಿ ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ.
ಮಹಾರಾಷ್ಟ್ರ ನಾಯಕರಿಗೆ ಕಾರಜೋಳ ತಿರುಗೇಟು ಯಾವುದೇ ಸಂಘ ಸಂಸ್ಥೆಗಳು ಠರಾವು ಮಂಡಿಸಿದ್ರೆ ಅದಕ್ಕೆ ಕವಡೇ ಕಾಸಿನ ಕಿಮ್ಮತ್ತು ಇರೋದಿಲ್ಲ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಬೆಳಗಾವಿ ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಅದರಲ್ಲಿ ಯಾವುದೇ ಬದಲಾವಣೆ ಒಪ್ಪುವುದಿಲ್ಲ. ಬೆಂಕಿ ಹಚ್ಚೋದೆ ಕೆಲವರ ಕೆಲಸ ಅದಕ್ಕೆ ಯಾವುದೇ ಬೆಲೆ ಇರಲ್ಲ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು 2006ರಲ್ಲಿ ವಿಧಾನಸಭೆ, ವಿಧಾನಪರಿಷತ್ನಲ್ಲಿ ಸರ್ವಾನುಮತದಿಂದ ಠರಾವು ಅಂಗೀಕಾರ ಮಾಡಲಾಗಿದೆ. ಮಹಾರಾಷ್ಟ್ರದ ಕೆಲವರು ಗಡಿ ವಿಷಯ ಕೆಣಕುವ ಪ್ರಯತ್ನ ಮಾಡ್ತಿದ್ದಾರೆ ಎಂದರು.
ಶಿವಸೇನೆ ಕ್ಯಾತೆ ಬರೀ ಪ್ರಚೋದಿಸುವ ತಂತ್ರ
ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶ ಬಗ್ಗೆ ಶಿವಸೇನೆ ಕ್ಯಾತೆ ಕೇವಲ ಪ್ರಚೋದಿಸುವ ತಂತ್ರ. ಅದಕ್ಯಾವುದಕ್ಕೂ ಬೆಲೆ ಕೊಡಬಾರದು. ಮೋದಿ ನೇತೃತ್ವದಲ್ಲಿ ಬಿಜೆಪಿ 23 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಭಾಷೆ, ಧರ್ಮ, ಜಾತಿ, ಮತ ನೋಡದೇ ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಜನ ಆಶೀರ್ವಾದ ಮಾಡ್ತಿದ್ದಾರೆ ಎಂದು ಸಚಿವ ಕಾರಜೋಳ ಹೇಳಿದರು.
ಮೀಸಲಾತಿಗೆ ಮರಾಠಾ, ಲಿಂಗಾಯತ ಸಮುದಾಯ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಸ್ವಾಭಾವಿಕವಾಗಿ ಎಲ್ಲ ವರ್ಗದವರೂ ಮೀಸಲಾತಿ ಕೇಳುತ್ತಾರೆ. ಎಲ್ಲ ವರ್ಗದಲ್ಲೂ ಬಡವರು ಶ್ರೀಮಂತರು ಇದ್ದೇ ಇರುತ್ತಾರೆ. ಬಡವರಿಗೆ ನ್ಯಾಯ ಸಿಗಬೇಕೆಂದು ಅನೇಕ ಜನಾಂಗದವರು ಕೇಳುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸಿಎಂ ಯೋಗ್ಯ ನಿರ್ಣಯ ಕೈಗೊಳ್ಳುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ ಆಸ್ತಿಕರಾಗ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ಕೋಡಿಮಠದ ಶ್ರೀಗಳ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಸಿದ್ದರಾಮಯ್ಯ ಅವರನ್ನು ನಾಸ್ತಿಕ ಎಂದು ತಿಳಿದಿದ್ವಿ. ಆದ್ರೆ ಸಿದ್ದರಾಮಯ್ಯ ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕೆಂದು ಆಸ್ತಿಕರಾಗ್ತಿದ್ದಾರೆ. ಅವರು ಜ್ಯೋತಿಷ್ಯ ಕೇಳ್ತಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಎಲ್ಲರಿಗೂ ಮಂತ್ರಿಸ್ಥಾನ ಸಿಗಲ್ಲ:
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಕಾರಣರಾದ ಶಾಸಕ ಅಭಯ ಪಾಟೀಲ್‌ಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯದ ಬಗ್ಗೆ ಮಾತನಾಡಿ, 17 ಜನ ಶಾಸಕರು ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶ ನೀಡಬೇಕಾಗಿದ್ದರಿಂದ ಕೆಲವು ಸಾರಿ ನಮ್ಮ ಲೆಕ್ಕಾಚಾರ ತಪ್ಪಿವೆ.
ಮುಂದಿನ ಬಾರಿಗೆ ಎಲ್ಲವನ್ನು ಸರಿ ಮಾಡ್ತೀವಿ. ನಮ್ಮ ಸಂವಿಧಾನದಲ್ಲಿ ಶೇ.15ರಷ್ಟು ಶಾಸಕರನ್ನು ಮಾತ್ರ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅವಕಾಶ ಇದೆ. ನಮ್ಮಲ್ಲಿ 224 ಜನರು ಶಾಸಕರಿದ್ದಾರೆ. ಒಂದೊಂದು ಸಾರಿ ಒಬ್ಬೊಬ್ಬರಿಗೆ ಅವಕಾಶ ಬರುತ್ತವೆ, ಅದಕ್ಕಾಗಿ ಕಾಯಬೇಕು. ಎಲ್ಲರನ್ನು ಏಕಕಾಲಕ್ಕೆ ಮಂತ್ರಿ ಮಾಡಲು ಆಗಲ್ಲ ಎಂದು ಗೋವಿಂದ್ ಕಾರಜೋಳ ಪರಿಸ್ಥಿತಿಯ ಬಗ್ಗೆ ತಮ್ಮದೇ ಸ್ಪಷ್ಟನೆ ಕೊಟ್ಟರು.
10 ದಿನ ಗಣೇಶೋತ್ಸವಕ್ಕೆ ಅವಕಾಶ:
ಬೆಳಗಾವಿಯಲ್ಲಿ 10 ದಿನಗಳ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ. ಹಿಂದೂ ಸಂಘಟನೆಗಳು ಸೇರಿ ಎಲ್ಲರ ಒತ್ತಾಯವಿತ್ತು. ಸೋಮವಾರ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರ ಬಿಳಲಿದೆ. 10 ದಿನಗಳ ಉತ್ಸವ ಆಚರಣೆಗೆ ಅವಕಾಶ ಮಾಡಿ ಕೊಡಲಾಗುವುದು ಎಂದರು.