ಕರ್ನಾಟಕ

karnataka

ETV Bharat / state

ಹೊಸ ತಾಲೂಕು ಕೇಂದ್ರಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ: ಸಚಿವ ದಿನೇಶ್ ಗುಂಡೂರಾವ್ - ​ ETV Bharat Karnataka

ರಾಜ್ಯದಲ್ಲಿ 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರುವ ಅರ್ಹತೆಯಿದ್ದು, ಹಣಕಾಸಿನ ಲಭ್ಯತೆ ನೋಡಿಕೊಂಡು ಮೇಲ್ದರ್ಜೆಗೆ ಏರಿಸುವ ಕಾರ್ಯ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

By ETV Bharat Karnataka Team

Published : Dec 14, 2023, 5:41 PM IST

ಬೆಂಗಳೂರು/ ಬೆಳಗಾವಿ :ರಾಜ್ಯದಲ್ಲಿ ಘೋಷಣೆಯಾದ ಹೊಸ ತಾಲೂಕು ಕೇಂದ್ರಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಗುರುವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಹೊಸದಾಗಿ ಘೋಷಣೆಯಾದ ತಾಲೂಕು ಕೇಂದ್ರಗಳ ಬಹಳಷ್ಟು ಆಸ್ಪತ್ರೆಗಳು ತಾಲೂಕು ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಕೆಯಾಗಿಲ್ಲ. ಇದರೊಂದಿಗೆ ರಾಜ್ಯದಲ್ಲಿ 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಹೊಂದಿವೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಹಣಕಾಸಿ ಲಭ್ಯತೆ ನೋಡಿಕೊಂಡು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುವುದು ಎಂದರು.

ದೇವದುರ್ಗ ಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ :ಶಾಸಕಿ ಕೆ.ಕರೆಮ್ಮ ಅವರ ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಂದಿನ ವರ್ಷದ ಆಯವ್ಯಯದಲ್ಲಿ ದೇವದುರ್ಗ ಪಟ್ಟಣದಲ್ಲಿ ಹೊಸದಾಗಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ಇದರೊಂದಿಗೆ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವುದಕ್ಕೂ ಸಮ್ಮತಿಸಿದರು.

ಇದೇ ವೇಳೆ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ತೀರ್ಥಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕೆ 35 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಅವಶ್ಯಕತೆಗೆ ಅನುಸಾರವಾಗಿ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಹೇಳಿದರು.

ತಾಳಿಕೋಟೆ ಆಸ್ಪತ್ರೆ ಮೇಲ್ದರ್ಜೆಗೆ :ಮುದ್ದೇಬಿಹಾಳ ಶಾಸಕ ಸಿ.ಎಸ್ ನಾಡಗೌಡ ತಾಳಿಕೋಟೆ ತಾಲೂಕು ಕೇಂದ್ರವಾಗಿ 7 ವರ್ಷಗಳಾಗಿವೆ. ಈಗಲೂ ತಾಳಿಕೋಟೆ ಆಸ್ಪತ್ರೆ ತಾಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಕೆಯಾಗಿಲ್ಲ. ಕೂಡಲೇ ತಾಳಿಕೋಟೆ ನಗರದಲ್ಲಿ 30 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಸಚಿವರಲ್ಲಿ ಅವರಲ್ಲಿ ಕೇಳಿದರು. ಇದಕ್ಕೆ ಸ್ಪಂದಿಸಿದ ದಿನೇಶ್ ಗುಂಡೂರಾವ್ ತಾಳಿಕೋಟೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದರು.

ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಸರಿಪಡಿಸಿ ಔಷಧ ಪೂರೈಕೆ : ಮಂಗಳವಾರ ವಿಧಾನ ಪರಿಷತ್​ನಲ್ಲಿ ಸದಸ್ಯೆ ಹೇಮಲತಾ ನಾಯಕ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಬಗ್ಗೆ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ನಿಗದಿತ ಸಮಯಕ್ಕೆ ಔಷಧ ಸಿಗುವುದಿಲ್ಲ ಎನ್ನುವುದು ಗಂಭೀರ ವಿಷಯವಾಗಿದೆ. ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧ ಪೂರೈಸಬೇಕಾಗಿರುವುದು ನಮ್ಮ ಮೂಲ ಜವಾಬ್ದಾರಿಯಾಗಿದೆ. ಆಸ್ಪತ್ರೆಗಳಿಗೆ ಶೇ.35ರಷ್ಟು ಮಾತ್ರ ಔಷಧ ಪೂರೈಕೆಯಾಗುತ್ತಿದೆ. ಟೆಂಡರ್ ಮೂಲಕ ಔಷಧ ಖರೀದಿಸುವ ಪ್ರಕ್ರಿಯೆಯಲ್ಲಿ ಸರಬರಾಜುದಾರರು ಭಾಗಿಯಾಗುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎನ್ನಲಾಗುತ್ತಿದ್ದು, ಈ ಅವ್ಯವಸ್ಥೆಯನ್ನು ಎರಡು ಮೂರು ತಿಂಗಳೊಳಗೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ :ಭ್ರೂಣ ಪರೀಕ್ಷೆ, ಭ್ರೂಣಹತ್ಯೆ ಪ್ರಕರಣ ತಡೆಗೆ ವಿಶೇಷ ನೀತಿ ಜಾರಿಗೆ ಚಿಂತನೆ: ದಿನೇಶ್ ಗುಂಡೂರಾವ್

ABOUT THE AUTHOR

...view details