ಜನಾರ್ದನ ರೆಡ್ಡಿ ಅವರು ಹೊಸ ರಾಜಕೀಯ ಪಕ್ಷ ಘೋಷಿಸಿರುವ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ ಬೆಳಗಾವಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಘೋಷಿಸಿರುವ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಇದನ್ನು ಜನ ಯಾವ ರೀತಿ ಸ್ವೀಕಾರ ಮಾಡುತ್ತಾರೆ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹಲವು ಜನರು ಕರ್ನಾಟಕದಲ್ಲಿ ರಾಜಕೀಯ ಪಕ್ಷ ಕಟ್ಟುವುದಕ್ಕೆ ಪ್ರಯತ್ನಿಸಿದ್ದಾರೆ. ಯಾರು ಏನೆಲ್ಲ ಮಾಡಿದ್ದಾರೆ, ಏನೇನಾಗಿದೆ ಎಂಬುದು ಚರಿತ್ರೆಯಲ್ಲಿ ದಾಖಲಾಗಿರುವ ವಿಷಯ. ಕಾಲವೇ ಕೆಲವೊಂದನ್ನು ನಿರ್ಣಯ ಮಾಡುತ್ತದೆ ಎಂದು ಸೂಚ್ಯವಾಗಿ ಹೇಳಿದರು.
ನಮ್ಮ ಪಕ್ಷ ಒಂದು ತತ್ವ ಇಟ್ಟುಕೊಂಡಿದೆ. ಜೊತೆಗೆ ಬಂದರೆ ಕರೆದುಕೊಂಡು, ಬಾರದೇ ಇರುವವರನ್ನು ಬಿಟ್ಟು, ಎದುರು ಬಂದರೆ ಎದುರಿಸಿ ರಾಜಕಾರಣ ಮಾಡುವುದನ್ನು ಪಕ್ಷ ನಮಗೆ ಹೇಳಿಕೊಟ್ಟಿದೆ. ಯಾರೇ ಪಕ್ಷ ಕಟ್ಟಿದರೂ ಬಿಜೆಪಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ರೆಡ್ಡಿ ಸಹೋದರರು ಬಿಜೆಪಿ ಪಕ್ಷದಲ್ಲಿ ಸಚಿವರು, ಶಾಸಕರು ಆಗಿದ್ದಾರೆ. ಜನಾರ್ದನ ರೆಡ್ಡಿ ಒಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿ ಸಚಿವರಾಗಿ ಕೆಲಸ ಮಾಡಿದವರು. ರೆಡ್ಡಿ ಮೇಲೆ ಕಾಂಗ್ರೆಸ್‌ನವರಿಗೆ ಮರುಕ, ಪ್ರೀತಿ ಯಾವಾಗ ಶುರುವಾಯಿತು ಎಂಬುದು ತಿಳಿಯುತ್ತಿಲ್ಲ. ಅವರು ಜೈಲಿನಲ್ಲಿರುವಾಗ ಈ ಪ್ರೀತಿ ಬಂದಿಲ್ಲ. ರೆಡ್ಡಿಯವರನ್ನು ಜೈಲಿಗೆ ಕಳುಹಿಸುವುದಕ್ಕೆ ಕಾಂಗ್ರೆಸ್ ಮುಂಚೂಣಿಯಲ್ಲಿತ್ತು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಜನಾರ್ದನ ರೆಡ್ಡಿ ಪಕ್ಷದಿಂದ ಕಾಂಗ್ರೆಸ್ಗೆ ಲಾಭವಾಗುತ್ತೋ ನಷ್ಟವಾಗುತ್ತೋ ಮುಂದೆ ಗೊತ್ತಾಗಲಿದೆ: ಸತೀಶ್ ಜಾರಕಿಹೊಳಿ