ಬೆಳಗಾವಿ :ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
ಇಂದಿರಾ ಕ್ಯಾಂಟೀನ್ ತುಂಬಾ ಸಂಕಷ್ಟದಲ್ಲಿವೆ ಎಂಬ ಪ್ರಶ್ನೆಗೆ, "ಹಿಂದಿನ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಗೆ ಕೆಟ್ಟ ಹೆಸರು ತರಲು ಸರಿಯಾಗಿ ನಿರ್ವಹಣೆ ಮಾಡದೇ ಕ್ಯಾಂಟೀನ್ಗಳನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಕ್ಯಾಂಟೀನ್ಗಳ ಪುನಶ್ಚೇತನಕ್ಕೆ 240 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಪ್ರಾದೇಶಿಕವಾಗಿ ಬೆಳಗಾವಿ ಭಾಗದಲ್ಲಿ ರೊಟ್ಟಿ ಊಟ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ, ಬೆಂಗಳೂರಿನಲ್ಲಿ ಅನ್ನ, ಇಡ್ಲಿ ವಿತರಿಸುವ ಮೆನು ಸಿದ್ಧಪಡಿಸಿ ಜಾರಿಗೊಳಿಸುತ್ತೇವೆ. ಈಗಾಗಲೇ ಇಡೀ 24 ಜಿಲ್ಲೆಯಲ್ಲಿ ಸಮೀಕ್ಷೆಯಾಗಿದ್ದು ಸಭೆ ನಡೆಸಿದ್ದೇವೆ" ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ವಿಸ್ತರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಪ್ರಸ್ತಾವನೆ ಕೊಟ್ಟರೆ ಶಾಸಕರು, ಜನರ ಬೇಡಿಕೆಗೆ ಅನುಗುಣವಾಗಿ ವಿಸ್ತರಣೆ ಮಾಡುತ್ತೇವೆ" ಎಂದು ಹೇಳಿದರು