ಬೆಳಗಾವಿ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ನಲ್ಲಿ ಬಾದಾಮಿ ಕ್ಷೇತ್ರಕ್ಕೆ 650 ಕೋಟಿ ಘೋಷಣೆ ಮಾಡಿದ್ದಾರೆ. ಆದರೂ ಸಿದ್ದರಾಮಯ್ಯ ದರಿದ್ರ ಸರ್ಕಾರ ಎನ್ನುತ್ತಿರುವುದು ಸರಿಯಲ್ಲ. ನಮ್ಮದು ಸುಭದ್ರ ಸರ್ಕಾರವೇ ಹೊರತು ದರಿದ್ರ ಸರ್ಕಾರವಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್, ಸಿದ್ದರಾಮಯ್ಯಗೆ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.
ನಮ್ಮದು ದರಿದ್ರ ಸರ್ಕಾರವಲ್ಲ, ಸುಭದ್ರ ಸರ್ಕಾರ: ಸಿದ್ದುಗೆ ಸಚಿವ ಭೈರತಿ ಗುದ್ದು
ಸಿಎಂ ಬಿಎಸ್ವೈ ಬಜೆಟ್ನಲ್ಲಿ ಬಾದಾಮಿ ಕ್ಷೇತ್ರಕ್ಕೆ 650 ಕೋಟಿ ಘೋಷಣೆ ಮಾಡಿದ್ದರೂ, ಸಿದ್ದರಾಮಯ್ಯ ದರಿದ್ರ ಸರ್ಕಾರ ಎನ್ನುತ್ತಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಭೈರತಿ ಬಸವರಾಜ್ ಕಿಡಿಕಾರಿದ್ದಾರೆ.
ಬೆಳಗಾವಿಯ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿ ಕ್ಷೇತ್ರಕ್ಕೆ 650 ಕೋಟಿ ಅನುದಾನ ನೀಡಿದ್ದನ್ನು ಸಿದ್ದರಾಮಯ್ಯ ಹೇಳುತ್ತಿಲ್ಲ. ಎಲ್ಲ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಾರೆ. ಪ್ರತಿಪಕ್ಷ ನಾಯಕರಾಗಿ ಅವರು ಎಲ್ಲವನ್ನೂ ಟೀಕಿಸುತ್ತಿದ್ದಾರೆ. ಆದರೆ, ನಮ್ಮ ಸಿಎಂ ಯಡಿಯೂರಪ್ಪ ಸಮರ್ಥರಿದ್ದಾರೆ. ಟೀಕೆಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಯಡಿಯೂರಪ್ಪ ಅವರಿಗಿದೆ ಎಂದರು.
ರಾಜ್ಯದ ವಸ್ತುಸ್ಥಿತಿ ಎಲ್ಲರಿಗೂ ಗೊತ್ತಿದೆ. ಚೌಕಟ್ಟಿನಲ್ಲಿ ಸಿಎಂ ಮಂಡಿಸಿರುವ ಬಜೆಟ್ ಎಲ್ಲ ವರ್ಗಕ್ಕೂ ಅನುಕೂಲವಾಗಿದೆ. ಆದರೂ ಪ್ರತಿಪಕ್ಷಗಳು ಟೀಕಿಸುವ ಕೆಲಸ ಮಾಡುತ್ತವೆ. ಅವರ ಕೆಲಸ ಅವರು ಮಾಡಲಿ ಎಂದು ಹೇಳಿದರು.