ಬೆಳಗಾವಿ : ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ 24/7 ನಿರಂತರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಚುರುಕುಗೊಳಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಈ ಕಾಮಗಾರಿ ತ್ವರಿತಗೊಳಿಸುವಂತೆ ಸೂಚನೆ ನೀಡಲಾಗಿದೆ, ಆಗಲೂ ಆಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮಾಜಿ ಸಿಎಂಗೆ ಭರವಸೆ ನೀಡಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗದೀಶ್ ಶೆಟ್ಟರ್:ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯನ್ನು ಈ ಹಿಂದೆ ಕೆಯುಐಡಿಎಫ್‍ಸಿ ಸಂಸ್ಥೆ ನಿರ್ವಹಿಸುತ್ತಿತ್ತು. ಆಗ ಚೆನ್ನಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಎಲ್ ಆ್ಯಂಡ್ ಟಿ ಕಂಪನಿಗೆ ಜವಾಬ್ದಾರಿ ವಹಿಸಿದ ನಂತರ, ನೀರು ಪೂರೈಕೆಯಲ್ಲಿ ಬಹಳ ವ್ಯತ್ಯಯವಾಗುತ್ತಿದೆ. 8 ರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಕುಡಿಯುವ ನೀರಿಗಾಗಿ ಜನ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಎಲ್ ಆ್ಯಂಡ್ ಟಿ ಸಂಸ್ಥೆಯ ಟೆಂಡರ್ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಿ, ಈ ಹಿಂದಿನಂತೆ ಜಲಮಂಡಳಿಗೆ ವಹಿಸಿಕೊಡಲು ಆಗ್ರಹಿಸಿದರು.
ಸೂಕ್ತ ಕ್ರಮದ ಭರವಸೆ, ಕಾಮಗಾರಿ ತ್ವರಿತಗೊಳಿಸಲು ಕ್ರಮ:ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯಿಸಿ ಸಭೆ ಇತ್ತೀಚೆಗೆ ಮುಗಿದಿದ್ದು, ಕಾಮಗಾರಿ ತ್ವರಿತಗೊಳಿಸುವಂತೆ ಸೂಚಿಸಲಾಗಿದೆ. ಶೀಘ್ರವೇ ಸಮಸ್ಯೆಯನ್ನು ಬಗೆ ಹರಿಸಿ, ಸರಾಗವಾಗಿ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ಆಗಲೂ ಸರಿ ಆಗದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಪರಿಹಾರ ನೀಡಲು ಹಣಕಾಸಿನ ತೊಂದರೆ ಇಲ್ಲ: ನೀರಾವರಿ ಯೋಜನೆಗಳಿಗೆ ಪರಿಹಾರ ನೀಡಲು ಹಣಕಾಸಿನ ತೊಂದರೆ ಇಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಉಂಟಾಗಿ ಯೋಜನೆ ತಡವಾಗುತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂ ಸ್ವಾಧೀನಕ್ಕಾಗಿ ವಿಶೇಷ ಅನುದಾನವನ್ನು ಮೀಸಲಿಟ್ಟಿದ್ದಾರೆ. ಹಾಗಾಗಿ, ಅನುದಾನದ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದರು.