ಬೆಳಗಾವಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರ ಬಗ್ಗೆ ಅವರ ಪಕ್ಷದವರೇ ಹೇಳಿರುವ ಕಲೆಕ್ಷನ್ ಗಿರಾಕಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅವರ ಪಕ್ಷದವರೇ ಡಿಕೆ ಶಿವಕುಮಾರ್ ಬಗ್ಗೆ ಹೇಳಿಕೆ ಕೊಟ್ಟ ಮೇಲೆ ವಿಶ್ಲೇಷಣೆ ಮಾಡಲು ಅವಕಾಶ ಇಲ್ಲ. ಅವರ ಪಕ್ಷದವರೇ ಹೇಳಿದ್ದಾರೆ ಎಂದರೆ ಕಾಂಗ್ರೆಸ್ನಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಉಸ್ತುವಾರಿ ಹಂಚಿಕೆ ವಿಚಾರ:
ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಹಂಚಿಕೆಯನ್ನು ಸಿಎಂ ನಿಶ್ಚಯಿಸುತ್ತಾರೆ. ಅವರೇ ಮುಂದುವರೆಯುತ್ತಾರೋ ಅಥವಾ ಬೇರೆಯವರಿಗೆ ಅವಕಾಶ ಕೊಡುತ್ತಾರೊ ಎಂಬುದನ್ನು ಕಾದು ನೋಡಬೇಕು. ಈ ವಿಚಾರವಾಗಿ ಸಿಎಂ ಎಲ್ಲರ ಜೊತೆಗೆ ಸಮಾಲೋಚನೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಉಸ್ತುವಾರಿ ಜವಾಬ್ದಾರಿ ನನಗೆ ನೀಡಿದರೆ ಖಂಡಿತವಾಗಿ ನಿಭಾಯಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್:
ಶಾಸಕ ರಮೇಶ್ ಜಾರಕಿಹೊಳಿ ನಮ್ಮ ನಾಯಕರು. ಎಲ್ಲ ರೀತಿಯಲ್ಲಿ ವಿಶ್ವಾಸಕ್ಕೆ ತಗೆದುಕೊಂಡು ಅವರ ಭಾವನೆಗೆ ಪೂರಕವಾಗಿ ಪಕ್ಷದಲ್ಲಿ ನಡೆದುಕೊಳ್ಳುತ್ತೇವೆ. ಅವರಿಗೆ ನೋವುವಾಗಿದೆ. ಅದು ಸಹಜ. ಆದರೆ ಅವರು ನಮ್ಮ ನಾಯಕರು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನಗಳು ನಮ್ಮ ಪಕ್ಷದಲ್ಲಾಗುತ್ತದೆ. ಅವರ ಸಹಕಾರ, ಕಾರ್ಯವನ್ನು ಪಕ್ಷ ಯಾವಾಗಲೂ ಸ್ಮರಿಸುತ್ತದೆ ಎಂದು ರಮೇಶ್ ಪರ ಬ್ಯಾಟಿಂಗ್ ಮಾಡಿದರು.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ:
ಸರ್ಕಾರದಿಂದ ಐಟಿ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಐಟಿ ದುರ್ಬಳಕೆ ಪ್ರಶ್ನೆಯೇ ಇಲ್ಲ. ಕಾನೂನು ಪಾಲಿಸಲಾಗುತ್ತಿದೆ. ಯಾರೆ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳೋದು ಸರ್ಕಾರದ ಕರ್ತವ್ಯ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ - ಹೆಚ್‌ಡಿಕೆ ನಡುವಿನ ಫೈಟ್ ವಿಚಾರಕ್ಕೆ ನಾನೇನು ಪ್ರತಿಕ್ರಿಯಿಸಲಿ, ಅವರವರೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕೆಪಿಸಿಸಿ ಮಾಧ್ಯಮ ಸಮನ್ವಯಕಾರ ಸಲೀಂ ತಲೆದಂಡ: ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ