ಬೆಳಗಾವಿ: ಶಿವಮೊಗ್ಗ ಜಿಲ್ಲೆಯ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲ. ಅವರು ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗೋದಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಬೇಕಾಗುತ್ತೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕುಡಚಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನು ಎಳೆದು ತಂದು ಅವರ ಮುಂದೆ ಫೈರಿಂಗ್ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ಕೊಲೆ ಆರೋಪಿಗಳು ಜೈಲಿನಲ್ಲಿ ಫೋನ್ ಬಳಕೆ ಮಾಡಿರುವುದು ಕಂಡುಬಂದ ತಕ್ಷಣವೇ ಕ್ರಮ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಜೈಲನ್ನೇ ಜಾಲಾಡಿಸಿದ್ದೇವೆ. ಮೊದಲು ಸೀಜ್ ಮಾಡುವ ಪ್ರಕ್ರಿಯೆ ಮಾತ್ರ ಇತ್ತು. ಈಗ ಕೈದಿಗಳ ಮೇಲೆ ಹಾಗೂ ಒಳಗೆ ಬಿಟ್ಟ ಸಿಬ್ಬಂದಿಯ ಮೇಲೂ ಎಫ್ಐಆರ್ ಆಗಿದೆ ಎಂದು ತಿಳಿಸಿದರು.
ಪಿಎಸ್ಐ ಅಭ್ಯರ್ಥಿಗಳ ಕಣ್ಣೀರು: ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಪಿಎಸ್ಐ ಅಭ್ಯರ್ಥಿಗಳು ಕಣ್ಣೀರು ಹಾಕಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ತನಿಖೆ ಮುಗಿದ ಬಳಿಕ ನಮಗೆ ನ್ಯಾಯ ಕೂಡಿಸುವಂತೆ ಪಿಎಸ್ಐ ಅಭ್ಯರ್ಥಿಗಳು ಗೃಹ ಸಚಿವರಿಗೆ ಕೈಮುಗಿದು ಬೇಡಿಕೊಂಡರು. ಈ ವೇಳೆ ಗೃಹ ಸಚಿವರು ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬಳಿಕ ನಿಮಗೆ ನ್ಯಾಯ ಕೊಡಿಸುತ್ತೇವೆಂದು ಭರವಸೆ ನೀಡಿದರು.
ಜಿಲ್ಲೆಯ ಕೆರೂರ ಪಟ್ಟಣದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, 3-4 ಜನರಿಗೆ ಚೂರಿ ಇರಿತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.