ಚಿಕ್ಕೋಡಿ :ಪ್ರೀತಿ ನಿರಾಕರಿಸಿದಳೆಂದು 16 ವರ್ಷದ ಬಾಲಕಿಯನ್ನು ಯುವಕನೋರ್ವ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರವಿವಾರ ಮಧ್ಯಾಹ್ನದ ಸುಮಾರಿಗೆ ಯುವತಿ ತನ್ನ ತಂಗಿಯರ ಜೊತೆ ಹಾರೂಗೇರಿ ತೇರದಾಳ ರಸ್ತೆಯ ಮಧ್ಯದಲ್ಲಿರುವ ವಡಕಿ ತೋಟಕ್ಕೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ಆರೋಪಿ ಅಮೀರ ಲಾಲಸಾಬ ಜಮಾದಾರ(19) ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದಾನೆ. ಯುವತಿ ನಿರಾಕರಿಸಿ ತನ್ನ ತಾಯಿಗೆ ಹೇಳುವುದಾಗಿ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವಕ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಯುವಕ ಅಲ್ಲಿಂದ ಪರಾರಿಯಾಗಿದ್ದ.
ಪ್ರೀತಿ ನಿರಾಕರಿಸಿದ ಬಾಲಕಿ ಕೊಂದ ಪಾಗಲ್ ಪ್ರೇಮಿ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಬಾಲಕಿಯನ್ನು ಸ್ಥಳೀಯರು ಹಾರೂಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಗೋಕಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ಯುವತಿ ಕೊನೆಯುಸಿರೆಳೆದಿದ್ದಾಳೆ.
ಸೋಮವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಕಾರಗೃಹಕ್ಕೆ ರವಾನಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆರ್ಎಸ್ಎಸ್, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿವೆ. ಇತ್ತ ಮಗಳನ್ನು ಕಳೆದುಕೊಂಡ ತಾಯಿ ಡಿಎಸ್ಪಿ ಎಸ್ ವಿ ಗಿರೀಶ್ ಅವರ ಮುಂದೆ ನ್ಯಾಯಕ್ಕಾಗಿ ಅಳಲನ್ನು ತೋಡಿಕೊಂಡಿದ್ದಾರೆ.