ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮತ್ತು ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಚಿಕ್ಕೋಡಿ ತಾಲೂಕಿನ ಅಂಕಲಿ-ಮಾಂಜರಿ ಸೇತುವೆ ವೀಕ್ಷಣೆ ಮಾಡಿ ನೀರಿನ ಪ್ರಮಾಣದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ನಂತರ ಮಾಂಜರಿ, ಯಡೂರು, ಚಂದೂರ, ಚಂದೂರಟೇಕ ಗ್ರಾಮಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರೊಂದಿಗೆ ತೆರಳಿ ಕೃಷ್ಣಾ ನದಿ ಪ್ರವಾಹದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡರು.
ಪ್ರವಾಹ ಭೀತಿ ಎದುರಾಗುವ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಈಗಾಗಲೇ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ಉಪವಿಭಾಗದ ಆರು ಸೇತುವೆ ಜಲಾವೃತಗೊಂಡಿವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಹಿರೇಮಠ, ಎಲ್ಲಾ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಚಿಕ್ಕೋಡಿ ಉಪವಿಭಾಗಿಯ ಅಧಿಕಾರಿ ರವೀಂದ್ರ ಕರಲಿಂಗನವರ್, ಚಿಕ್ಕೋಡಿಯ ತಹಶೀಲ್ದಾರ ಸುಭಾಶ ಸಂಪಗಾವಿ, ಪೊಲೀಸ್ ಅಧಿಕಾರಿಗಳು ಹಾಗೂ ತಾಲೂಕಾಧಿಕಾರಿಗಳು ಜಿಲ್ಲಾಧಿಕಾರಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು.