ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಉದ್ಧಟತನ: ಬೈಕ್​ ರ‍್ಯಾಲಿ, ಪ್ರತಿಭಟನೆಗೆ ನಿರ್ಧಾರ

ಬೆಳಗಾವಿಯಲ್ಲಿ ನಾಡದ್ರೋಹಿ ಘೋಷಣೆಗಳನ್ನು ಕೂಗಿದ ಎಂಇಎಸ್​ ಕಾರ್ಯಕರ್ತರು- ಕೊಲ್ಲಾಪುರದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ- ಬೆಳಗಾವಿಯಲ್ಲಿ ಭಾರಿ ಪೊಲೀಸ್​ ಬಂದೋಬಸ್ತ್​

MES Workers Garlanded Shivaji statue
ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಎಂಇಎಸ್​ ಕಾರ್ಯಕರ್ತರು

By

Published : Dec 26, 2022, 10:40 AM IST

Updated : Dec 26, 2022, 12:31 PM IST

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಉದ್ಧಟತನ

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿ ತಮ್ಮ ಉದ್ಧಟತನ ಮುಂದುವರಿಸಿದ್ದಾರೆ. ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದಲ್ಲಿ ನಾಡದ್ರೋಹಿಗಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಹೆಂಗೆ ತೋ ಮಹಾರಾಷ್ಟ್ರ ಮೇ.. ನಹೀ ತೋ ಜೇಲ್ ಮೇ ಎಂದು ಘೋಷಣೆ ಕೂಗಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಒತ್ತಾಯಿಸಿದ್ದಾರೆ.

ಮಹಾಮೇಳಾವ್‌ಗೆ ತಡೆ ನೀಡಿದ ಬೆನ್ನಲ್ಲೇ ನಾಡದ್ರೋಹಿ ಎಂಇಎಸ್ ಹೊಸ ವರಸೆ ಶುರು ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇಂದು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿ ಬೆಳಗಾವಿಯ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಎಂಇಎಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಎಂಇಎಸ್ ಮುಖಂಡ ಪ್ರಕಾಶ್ ಮರಗಾಳಿ, ಮಾಲೋಜಿ ಅಷ್ಟಗಿ ಎಂಇಎಸ್ ಕಾರ್ಪೊರೇಟರ್ ರವಿ ಸಾಳುಂಕೆ ಸೇರಿ 20ಕ್ಕೂ ಹೆಚ್ಚು ಮುಖಂಡರು ಭಾಗಿಯಾಗಿದ್ದಾರೆ.

ಎಂಇಎಸ್ ಕಾರ್ಯಕರ್ತರು ಬೆಳಗಾವಿಯಿಂದ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಗೆ ತೆರಳಿ ಕೊಗನೊಳ್ಳಿಯಿಂದ ಮಹಾರಾಷ್ಟ್ರದ ಕೊಲ್ಲಾಪುರ ಡಿಸಿ ಕಚೇರಿಯವರೆಗೆ ಬೈಕ್ ರ‌್ಯಾಲಿ ನಡೆಸಿ ಅಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ವಹಿಸಬೇಕು ಎಂದೂ ಮತ್ತೊಂದು ಕ್ಯಾತೆ ತೆಗೆದಿದ್ದಾರೆ. ಎಸಿಪಿ ನಾರಾಯಣ ಭರಮಣಿ, ಚಂದ್ರಪ್ಪ ನೇತೃತ್ವದಲ್ಲಿ ಬೆಳಗಾವಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ:ಬೆಳಗಾವಿ: ಟಿಳಕವಾಡಿಯಲ್ಲಿ 144 ಸೆಕ್ಷನ್ ಜಾರಿ, ಐವರು ಎಂಇಎಸ್ ಕಾರ್ಯಕರ್ತರು ವಶಕ್ಕೆ

ಮಹಾಮೇಳಾವ್​ಗೆ ನಿರ್ಬಂಧ ಹೇರಿದ್ದ ಪೊಲೀಸ್​:​ ವಾರದ ಹಿಂದೆ ಎಂಇಎಸ್​ ಮುಖಂಡರು ಬೆಳಗಾವಿ ನಗರದಲ್ಲಿ ಮಹಾಮೇಳಾವ್​ ನಡೆಸಲು ನಿರ್ಧರಿಸಿದ್ದಾಗ ಪೊಲೀಸರು ಅದಕ್ಕೆ ನಿರ್ಬಂಧ ಹೇರಿದ್ದರು. ಕಾರ್ಯಕ್ರಮದ ಹಿನ್ನೆಲೆ ಅನುಮತಿ ಪಡೆಯುವ ಮುನ್ನವೇ ಹಾಕಲಾಗಿದ್ದ ವೇದಿಕೆಯನ್ನು ತೆರವುಗೊಳಿಸಲಾಗಿತ್ತು. ಕಳೆದ ವರ್ಷ ಅಧಿವೇಶನ ಸಮಯದಲ್ಲಿ ಎಂಇಎಸ್ ಕಿಡಿಗೇಡಿಗಳು ನಡೆಸಿದ್ದ ಅಟ್ಟಹಾಸಕ್ಕೆ ಈ ಬಾರಿ ಎಚ್ಚೆತ್ತುಕೊಂಡಿದ್ದ ಬೆಳಗಾವಿ ಪೊಲೀಸರು ಎಂಇಎಸ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ನಿರ್ಬಂಧ ನಡುವೆಯೂ ಮಹಾಮೇಳಾವ್ ನಡೆಸಲು ಆಗಮಿಸಿದ್ದ ಎಂಇಎಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಬುದ್ಧಿಮಾತು ಹೇಳಿದ್ದ ಎಡಿಜಿಪಿ ಅಲೋಕ್​ ಕುಮಾರ್​: ಅದಾದ ನಂತರ ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಎಂಇಎಸ್​ ಮುಖಂಡರನ್ನು ಒಟ್ಟಿಗೆ ಕರೆದು ಎಡಿಜಿಪಿ ಅಲೋಕ್​ ಕುಮಾರ್​ ಮಾತುಕತೆ ನಡೆಸಿ ಎರಡೂ ಕಡೆಯವರಿಗೆ ಬುದ್ಧಿಮಾತುಗಳನ್ನು ಹೇಳಿದ್ದರು. ಎರಡು ಕಡೆಯವರು ತಿಕ್ಕಾಟದಿಂದ ಬೆಳಗಾವಿ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಬುದ್ಧಿ ಮಾತು ಹೇಳುವ ಜೊತೆಗೆ ಗಡಿವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು ತೀರ್ಪು ಬರುವವರೆಗೂ ಶಾಂತಿ ಕಾಪಾಡುವಂತೆ ತಿಳಿಸಿದ್ದರು.

ಆದರೆ ಈಗ ಎಂಇಎಸ್​ ಸಂಘಟನೆ ಕಾರ್ಯಕರ್ತರು ಸೇರಿದಂತೆ ಹಿರಿಯ ಮುಖಂಡರೂ ಸೇರಿ ಮತ್ತೆ ತಮ್ಮ ಹಳೇ ವರಸೆಯನ್ನೇ ಪ್ರಾರಂಭಿಸಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದದಲ್ಲಿ ಪ್ರಾರಂಭದಿಂದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಬೆಳಗಾವಿಯಲ್ಲಿ ಗಲಭೆ ಎಬ್ಬಿಸುತ್ತಿರುವ ಎಂಇಎಸ್​ ಮತ್ತೆ ನಾಡದ್ರೋಹಿ ಘೋಷಣೆಗಳನ್ನು ಕೂಗಿದೆ. ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಿದೆ. ಎಡಿಜಿಪಿ ಅಲೋಕ್​ ಕುಮಾರ್​ ಅವರು ನಡೆಸಿದ ಶಾಂತಿಸಭೆಯನ್ನು ಎಂಇಎಸ್​ ಅಲ್ಲಗಳೆದಂತಿದೆ.

ಇದನ್ನೂ ಓದಿ:ಎಂಇಎಸ್ ಮುಖಂಡರಿಗೆ ಬದ್ಧಿ ಮಾತು ಹೇಳಿದ ಎಡಿಜಿಪಿ ಅಲೋಕ್ ಕುಮಾರ್

Last Updated : Dec 26, 2022, 12:31 PM IST

ABOUT THE AUTHOR

...view details