ಬೆಳಗಾವಿ:ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಪ್ರದರ್ಶಿಸಲು ಹೆಣಗಾಡುತ್ತಿದೆ. ಈ ಮಹಾನಗರ ಪಾಲಿಕೆ ಚುನಾವಣೆಯನ್ನೇ ಗುರಿಯನ್ನಾಗಿಟ್ಟುಕೊಂಡು ಇದೀಗ ಹೊಸದೊಂದು ಕ್ಯಾತೆ ಶುರು ಮಾಡಿದೆ.
ಸೆಪ್ಟೆಂಬರ್ ಮೂರರಂದು ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭಗೊಂಡಿದೆ. ಭಾಷಾ ರಾಜಕಾರಣ ಮಾಡುತ್ತಾ ಕನ್ನಡ ಹಾಗೂ ಮರಾಠಿಗರ ಮಧ್ಯೆ ವಿಷಬೀಜ ಬಿತ್ತುತ್ತಿದ್ದ ಎಂಇಎಸ್ ಈಗ ಮತ್ತೆ ಕ್ಯಾತೆ ಶುರು ಹಚ್ಚಿಕೊಂಡಿದೆ.
ಎಂಇಎಸ್ನ ಮಾಜಿ ಶಾಸಕ ಮನೋಹರ್ ಕಿಣೇಕರ್ ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ನಾಮಪತ್ರ ನಮೂನೆ ಸೇರಿ ಇತರೆ ಚುನಾವಣಾ ದಾಖಲೆ ಕನ್ನಡದಲ್ಲಿ ದಾಖಲೆ ಕೊಡುತ್ತಿದ್ದಾರೆ. ಮರಾಠಿ ಭಾಷಿಕರಾದ ನಮಗೆ ಸಮಸ್ಯೆಯಾಗುತ್ತಿದೆ ಅಂತಾ ಕ್ಯಾತೆ ಆರಂಭಿಸಿದ್ದಾರೆ.
ಗೆಲ್ಲುವ ಗುರಿ: ಈ ಕುರಿತು ಮಾತನಾಡಿರುವ ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್ 'ಈಗಾಗಲೇ ನಾಮಪತ್ರ ಪ್ರಕ್ರಿಯೆ ಶುರುವಾಗಿದೆ. ಮರಾಠಿ ಭಾಷೆಯಲ್ಲಿ ಚುನಾವಣಾ ದಾಖಲೆ ನೀಡಬೇಕು. ಕನ್ನಡ, ಮರಾಠಿ, ಇಂಗ್ಲೀಷ್ ಭಾಷೆಯಲ್ಲಿ ನಾಮಪತ್ರ ನಮೂನೆ ನೀಡಬೇಕು. ಭಾಷಾ ವಿಚಾರ, ಗಡಿ ವಿಚಾರ ಹಾಗೂ ರಾಜ್ಯ ಕೇಂದ್ರ ಸರ್ಕಾರದಿಂದ ಮರಾಠಿಗರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಜನರ ಮುಂದಿಟ್ಟು ಚುನಾವಣೆ ಹೋಗ್ತೇವೆ. 58 ವಾರ್ಡ್ ಗಳಲ್ಲಿ 45 ಪ್ಲಸ್ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಹೋಗ್ತೇವೆ' ಎಂದು ತಿಳಿಸಿದ್ದಾರೆ.
ಕರವೇ ಪ್ರವೀಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ಆರ್.ಅಭಿಲಾಷ್ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ: ಈ ಹಿಂದೆಯೂ ಭಾಷಾ ರಾಜಕಾರಣ ಗಡಿ ವಿವಾದ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಾ ಬಂದಿದೆ. ಈಗಾಗಲೇ ಬೆಳಗಾವಿ ಡಿಸಿ ಜಾತಿ, ಭಾಷೆ ಆಧಾರದ ಮೇಲೆ ಮತಯಾಚನೆ ಮಾಡಬಾರದು. ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ. ಹಾಗೇ ಯಾರಾದರೂ ಮತಯಾಚನೆ ಮಾಡಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಇಎಸ್ ಪುಂಡರು ಕನ್ನಡ ಕಲಿತುಕೊಳ್ಳಲಿ: ಮರಾಠಿ ಭಾಷೆಯಲ್ಲಿ ನಾಮಪತ್ರ ಹಾಗೂ ಇತರೆ ದಾಖಲೆ ನೀಡುವಂತೆ ಆಗ್ರಹಿಸಿರುವ ಎಂಇಎಸ್ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಎಂಇಎಸ್ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಹಾಗೂ ಕನ್ನಡಿಗನೇ ಸಾರ್ವಭೌಮ. ಕ್ಯಾತೆ ತೆಗೆಯುವ ಎಂಇಎಸ್ ಪುಂಡರು ಕನ್ನಡ ಕಲಿತುಕೊಳ್ಳಲಿ, ಇಲ್ಲವಾದ್ರೆ ರಾಜ್ಯ ಬಿಟ್ಟು ತೊಲಗಲಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಚುನಾವಣೆ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕಾರ್ಯಕ್ಕೆ ಏನಾದರೂ ಮುಂದಾದ್ರೆ ಅಂತವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ ಅಂತಾ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅದೇನೇ ಇರಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ರಾಜಕೀಯ ಅಸ್ತಿತ್ವ ಸ್ಥಾಪಿಸಬೇಕೆಂದು ಕುಂದಾನಗರಿಯಲ್ಲಿ ಹೆಣಗಾಡುತ್ತಿರುವ ಎಂಇಎಸ್ ದಿನಕ್ಕೊಂದು ಕ್ಯಾತೆ ತೆಗೆಯುತ್ತಿದೆ. ನಾಡದ್ರೋಹಿ ಎಂಇಎಸ್ ನಾಯಕರ ಮೇಲೆ ನಿಗಾ ಇಟ್ಟು ಬೆಳಗಾವಿಯಲ್ಲಿ ಕಾನೂನು & ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿ ಚುನಾವಣೆ ನಡೆಯಲಿ ಎಂಬುದು ಸಾರ್ವಜನಿಕರ ಆಗ್ರಹ.
ಓದಿ:ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ : ರಂದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ