ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಈ ನಡುವೆ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘೋಷಣೆ ಕೂಗುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿನ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿದ ಎಂಇಎಸ್ ನಾಯಕರು, ಗೌರವ ಸಲ್ಲಿಸಿದರು. ನಿಷೇಧಾಜ್ಞೆ ಹೇರಿದ್ದರಿಂದ ಕರ್ನಾಟಕದಲ್ಲಿ ಅನುಮತಿ ಸಿಗದ ಹಿನ್ನೆಲೆ ಮಹಾರಾಷ್ಟ್ರದ ಶಿನೊಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಶಿನೊಳ್ಳಿಗೆ ತೆರಳುವ ಮುನ್ನ ಹುತಾತ್ಮರ ಸ್ಮಾರಕಕ್ಕೆ ಎಂಇಎಸ್ ನಾಯಕರು ಮಾಲಾರ್ಪಣೆ ಮಾಡಿದರು. ಬಳಿಕ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಇದ್ದರೆ ಮಹಾರಾಷ್ಟ್ರದಲ್ಲಿ ಇರುತ್ತೇವೆ, ಇಲ್ಲವೇ ಜೈಲಿನಲ್ಲಿ ಇರುತ್ತೇವೆ ಎಂದು ಘೋಷಣೆ ಕೂಗಿದರು. ಬೆರಳಣಿಕೆಯಷ್ಟು ಮಾತ್ರ ಎಂಇಎಸ್ ನಾಯಕರು ಭಾಗಿಯಾಗಿದ್ದು ಕಂಡು ಬಂದಿತು.
ಎಂಇಎಸ್ ಪ್ರತಿಭಟನೆಗೆ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಶಿವಸೇನೆ ಕಾರ್ಯಕರ್ತರು ಕೂಡ ಸೇರಿಕೊಂಡರು. ಶಿನೊಳ್ಳಿಯಿಂದ ಜೊತೆಯಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದ ಉಭಯ ಸಂಘಟನೆಯ ಮುಖಂಡರು, ಕರ್ನಾಟಕ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ, ಮಹಾರಾಷ್ಟ್ರ ಸಂಪರ್ಕಿಸುವ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗಡಿಯಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ.